ಸೂರಜ್ ಎಂಬ ಗೆಳೆಯನಿಗೆ
ನಾವಿಬ್ಬರೂ ಪ್ರೀತಿಯಿಂದ, ಅಷ್ಟೇ ಮಮತೆಯಿಂದ, ಅಷ್ಟೇ ಸಂಯಮದಿಂದ ಕಟ್ಟಿದ ಪ್ರೀತಿಯ ಅರಮನೆಯಿಂದ ನಾನು ನಿನಗೆ ಹೇಳದೆ ಕೇಳದೇ ಹೊರನಡೆದ ನನ್ನ ತಪ್ಪನ್ನ ಮನ್ನಿಸಿಬಿಡು. ನಿನ್ನೆದೆಯೊಳಗಿನ ಅಷ್ಟೂ ಮಮತೆಗೆ ಘೋರಿ ಕಟ್ಟಿದ ನನ್ನ ಅಸಹಾಯಕತೆಯನ್ನ ಮನ್ನಿಸಿಬಿಡು. ನಿನ್ನ ಜೊತೆ ಕೊನೆಯವರೆಗೂ ಬರಲಾರದ ಈ ಹೆಜ್ಜೆಗಳ ತಪ್ಪನ್ನ ಮತ್ತೊಮ್ಮೆ ಮನ್ನಿಸಿಬಿಡು. ನಿನಗಿಟ್ಟ ಸಾವಿರಾರು ಆಣೆ ಪ್ರಮಾಣಗಳನ್ನ ಒಂದೇ ಸಲ ಸುಳ್ಳಾಗಿಸಿದ ಈ ಗೆಳತಿಯನ್ನ ಮತ್ತೊಮ್ಮೆ ಮನ್ನಿಸಿಬಿಡು. ಪ್ರಪಂಚದಲ್ಲಿರುವ ಎಲ್ಲ ಪ್ರೇಮಕಥೆಗಳನ್ನ ನಿನ್ನ ಭುಜಕ್ಕೊರಗಿ ಓದಿ ಹೇಳುತ್ತಾ, ಕೊನೆಗೆ ನಮ್ಮ ಪಾಲಿನ ಪ್ರೇಮದ ಪುಸ್ತಕದಲ್ಲಿ ಒಂದೇ ಒಂದು ವಾಕ್ಯವನ್ನೂ ಬರೆಯದೇ ಎದ್ದು ಹೊರಟು ಬಂದ ಈ ನಿನ್ನ ಹುಡುಗಿಯನ್ನ ಕೊನೆಯ ಸಲ ಕ್ಷಮಿಸಿಬಿಡೋ ಪ್ಲೀಸ್.
ನಿನ್ನ ಕುರಿತಾಗಿ ಅದೆಷ್ಟು ಕನಸುಗಳನ್ನ ಕಂಡಿದ್ದೆನೋ ಕಣೊ. ಹಾಳಾದ್ದು ಕೊನೆಗೂ ಒಂದೂ ನೆಪಮಾತ್ರಕ್ಕಾದರೂ ನನಸಾಗಲಿಲ್ಲ. ಅಷ್ಟು ಕನಸುಗಳ ಮೇಲೆ ನೆಪ ಮಾತ್ರಕ್ಕಾದರೂ ಅಷ್ಟೊಂದು ದೇವರುಗಳ ಒಂದೇ ಒಂದು ಆಶೀರ್ವಾದ ಬೀಳಲಿಲ್ಲ. ಬೇಡಿಕೊಂಡ ಒಂದೇ ಒಂದು ಕನಸು ನನಸಾಗಿದ್ದರೂ ನಾನು ನಿನ್ನ ಮಡಿಲಲ್ಲಿರುತ್ತಿದ್ದೆ. ತಬ್ಬಿಕೊಂಡು ನಿನ್ನ ಉಸಿರುಗಟ್ಟಿಸುತ್ತಿದ್ದೆ, ನಮಗೆ ಹುಟ್ಟಲಿರುವ ಮಗುವ ಹೆಸರ ಇಡೋದಕ್ಕೆ ನಿನ್ನ ಜೊತೆ ಜಗಳಕ್ಕೆ ಬೀಳುತ್ತಿದ್ದೆ, ಸುಮ್ಮನೆ ಮುನಿಸಿಕೊಳ್ಳುತ್ತಿದ್ದೆ, ನಾನೆ ಸ್ಸಾರಿ ಕೇಳುತ್ತಿದ್ದೆ. ಎಲ್ಲಾ ಕನಸು ಕಣೊ. ಇದೆಲ್ಲ ನೋಡಿದ್ರೆ ಏನ್ ಅನ್ಸುತ್ತೆ ಗೊತ್ತಾ? ಪ್ರಪಂಚದ ಅತ್ಯಂತ ದುರದೃಷ್ಟ ಪ್ರೇಮಿಗಳಲ್ಲಿ ನಾವೆ ಮೊದಲ ಸಾಲಿನಲ್ಲಿ ನಿಲ್ಲೋರು ಅಲ್ವೇನೊ?
ಬದುಕು ಒಂದೊಂದು ಸಲ ತುಂಬಾ ಕ್ರೂರಿ ಅನ್ನಿಸಿಬಿಡುತ್ತೆ. ಇಲ್ಲಿ ನಮ್ಮಂತವರ ಪ್ರೀತಿ ಗುಣಿಸಿಕೊಳ್ಳೋದಿಲ್ಲ. ಕೇವಲ ಕಳೆದುಕೊಳ್ಳುತ್ತದೆ. ಕೆಲವು ಬಿಡಿಸಲಾರದ ಬಂಧನಗಳ ಸಂಕೋಲೆಗಳು ಒಂದು ನಿರ್ಮಲವಾದ ಪ್ರೀತಿಯನ್ನ ಬಂಧಿಸಿಬಿಡುತ್ತವೆ. ನನ್ನಂತ ಸೆಂಟಿಮೆಂಟಲ್ ಹುಡುಗಿಯರು ಬಂಧನದಿಂದ ಬಿಡಿಸಿಕೊಳ್ಳಲಾರದೆ ಕಣ್ಣೀರಿಡುತ್ತಾರೆ. ಹುಡುಗಿಯರೆಂದರೇ ಬರಿ ಕೈ ಕೊಡೋರು ಅನ್ನುವ ಮಾತಿಗೆ ಮತ್ತಷ್ಟು ಪುರಾವೆ ಒದಗಿಸುತ್ತಾರೆ. ಒಂದಷ್ಟು ಧೈರ್ಯ ತೆಗೆದುಕೊಂಡು ಒಂದಡಿ ಮುಂದೆ ಹೆಜ್ಜೆಯಿಟ್ಟರೂ ಕಾಣದ ಕೈಗಳು ಮತ್ತಷ್ಟು ಹಿಂದಕ್ಕೆಳೆಯುತ್ತವೆ. ಬದುಕು ಅಂದ್ರೆ ಕಾಂಪ್ರೋಮೈಸ್ ಅಂದ್ಕೊಂಡಿದ್ದೆ. ಆದರೆ ಇಷ್ಟೊಂದು ಅಂತ ನಿನ್ನಾಣೆ ಅಂದ್ಕೊಂಡಿರಲಿಲ್ಲ. ನನ್ನ ಮುಂದಿದ್ದು ಎರಡು ಆಯ್ಕೆ ಕಣೊ.. ಅಪ್ಪ ಅಮ್ಮ ಮತ್ತು ನೀನು. ನಾನು ಮೊದಲನೆಯದನ್ನ ಆಯ್ದುಕೊಂಡು ಮುದ್ದಿನ ಮಗಳು ಅನ್ನಿಸಿಕೊಂಡರೂ ಪ್ರೇಮ ಲೋಕದ ಪಾಲಿಗೆ ಕೈ ಕೊಟ್ಟವಳು ನಂಬಿಕೆ ದ್ರೋಹಿ ಅನ್ನಿಸಿಕೊಳ್ತಾನೆ ನಿನ್ನ ಮನದ ಗುಡಿಯಿಂದ ಎದ್ದು ಹೋಗ್ತಾ ಇದ್ದೀನಿ.. ಪ್ಲೀಸ್ ನೀನು ನನ್ನ ಪ್ರೀತಿಸಿದ್ದು ನಿಜವೇ ಆದರೇ ನನ್ನನ್ನ ಕೊನೆಯ ಬಾರಿಗೆ ಕ್ಷಮಿಸಿ ಬಿಡು.
ನಿನ್ನ ಪೂಜಿತ

