ನಿಮ್ಮ ಭಾವನೆಗೆ ನನ್ನ ಕೆಲವೇ ಕೆಲವು ಪದಗಳು
ಇಲ್ಲಿರುವ ಯಾವುದೇ ಕವಿತೆಗಳಿಗೆ ಮತ್ತು ಹಾಳುಮೂಳು ಬರಹಗಳಿಗೆ ಒಂದು ದೃಷ್ಟಿಕೋನ ಒಂದು ಗುರಿ,ಧ್ಯೇಯ ಯಾವುದು ಇಲ್ಲ.ಇಲ್ಲಿರುವ ಪದಗಳಿಗೆ ಕವಿತೆ ಅನ್ನುವ ಚಂದದ ಹೆಸರಿನಿಂದ ಕರೆಯಬೇಕ? ಅದೂ ತೋಚುತ್ತಿಲ್ಲ.ಕೊನೆಗೆ ಈ ಪದಗಳ ಮೂಲಕ ನಾನು ಏನು ಹೇಳಲಿಕ್ಕೆ ಹೊರಟಿದ್ದೇನೆ ಅಂತ ಕೆಲವೊಂದು ಸಲ ನನಗೂ ಅರ್ಥವಾಗುವುದಿಲ್ಲ. ಇಲ್ಲಿರುವುದೆಲ್ಲ ಕೇವಲ ಹುಚ್ಚು ಮನಸ್ಸಿನ ಭೋರ್ಗರೆತಗಳು ಮಾತ್ರ. ಇವನ್ನ ಕವಿತೆ ಮತ್ತು ಅದ್ಭುತ ಬರಹ ಅಂತ ಓದುವ ನಿಮಗೆ ಮತ್ತು ನಿಮ್ಮ ಸಹನೆಗೆ ಮತ್ತು ಅತ್ಯಮೂಲ್ಯ ಸಮಯಕ್ಕೆ ನಾನು ಅಭಾರಿ…….ಮತ್ತೆ ಇಲ್ಲಿ ಕೆಲವೊಂದು ಸಲ ಕೆಲವು ಘಟನೆಗಳನ್ನ ನೆರವಾಗಿ ಹೇಳಬೇಕಾದ ಸಮಯದಲ್ಲಿ ಅನಿವಾರ್ಯವಾಗಿ ಅಸಂಬದ್ದ ಪದಗಳನ್ನ ಉಪಯೋಗಿಸಲೇ ಬೇಕಾಗುತ್ತದೆ ..ಮಡಿವಂತ ಮಹಾಶಯರು ನನ್ನ ಈ ಒಂದು ತಪ್ಪನ್ನ ಕ್ಷಮಿಸಿಬಿದಬೇಕು…….ಇಂತಿ ನಿಮ್ಮ ಪ್ರೀತಿಯ ನವಿಲುಗರಿ ಹುಡುಗ

ಒಂದು ಭಾನುವಾರದ ಕಥೆ

ಭಾನುವಾರ..! ವಾರಪುರ್ತಿ ಕಂಪ್ಯೂಟರ್ ಮುಂದೆ ಕುಳಿತು ಕುಟ್ಟಿದ್ದರ ಫ಼ಲವೇನೊ ಅನ್ನುವಂತೆ ಕುಂಭಕರ್ಣ ನಿದ್ರೆ.ಅವತ್ತಾದ್ರು ಪೂರ್ತಿ ಮಲಗಿ ಸೇಡುತೀರಿಸಿಕೊಳ್ಳಬೇಕೆಂದು ಎಲ್ಲೋ ಅನಾಥವಾಗಿ ಬಿದ್ದಿದ್ದ ಬೆಡ್ ಶೀಟ್ ಎಳೆದುಕೊಂಡು ಮತ್ತೆ ನಿದ್ರಾದೇವಿಗೆ ಶರಣಾಗಬೇಕು, ಅನ್ನುವಷ್ಟರಲ್ಲಿಯೇ “ಮಹಾಜನಗಳೇ ಮತಭಾಂಧವರೇ” ಅನ್ನುತ್ತ ಮೈಕಾಸೂರ ಅರಚಿಕ್ಕೊಳ್ಳತೊಡಗಿದ. ಅವನ ಆರ್ಭಟಕ್ಕೆ ನಿದ್ರಾದೇವಿ ಕೋಪಿಸಿಕೊಂಡು ನನ್ನಿಂದ ದೂರವಾದಳು.

ಮನಸ್ಸಿನಲ್ಲಿಯೇ ಮೈಕಾಸುರನಿಗೆ ಶಪಿಸುತ್ತ ಕೊಣೆಯ ಕಿಟಕಿ ತೆಗೆದುನೋಡಿದರೆ ಪಕ್ಕದಲ್ಲಿಯೆ ಯಾವುದೋ ಸಮಾರಂಭ ನಡೆಯುವ ಎಲ್ಲಾ ಸೂಚನೆಗಳಿದ್ದವು.ಅಲ್ಲಿ ಹಾಕಿರುವ ಕಟೌಟುಗಳನ್ನ ನೋಡಿದರೆ ಸಾಕಿತ್ತು ಯಾವುದೋ ರಾಜಕೀಯ ಸಮಾರಂಭ ಸದ್ಯದಲ್ಲೇ ಆರಂಬವಾಗಲಿದೆ ಅಂತ. ಚಿಕ್ಕವರಾಗಿದ್ದಾಗಿನ ನೆನಪು ಮತ್ತೆ ಮರುಕಳಿಸಿದಂತಾಯಿತು. ಬಣ್ಣ ಬಣ್ಣದ ಕರಪತ್ರಗಳನ್ನ ರಾಜಕೀಯ ಪಕ್ಷಗಳು ತರವಾರಿ ವಾಹನಗಳ ಮೂಲಕ ನಮಗೆಲ್ಲ ಹಂಚಿತ್ತಿದ್ದಿದ್ದು.ನಾವೆಲ್ಲ ಆ ವಾಹನಗಳ ಹಿಂದೆ ಓಡುತ್ತ ಕರಪತ್ರಗಳನ್ನ ತೆಗೆದುಕೊಳ್ಳುತ್ತಿದ್ದಿದ್ದು. ಇದೆಲ್ಲ ನೆನಪಾಗಿ ಸಮಾರಂಭ ಹೇಗಿರುತ್ತೆ ಅಂತ ನೋಡೆಬಿಡುವಾ ಅಂತ ಮನಸ್ಸಿನ ಮಹರಾಯ ಹೇಳಿದ ಹಾಗಾಯ್ತು.ಸರಿ ಮುಖ ತೊಳೆದ ಹಾಗೆ ಮಾಡಿ ಸಮಾರಂಭ ನಡೆಯುವ ಜಾಗದ ಕಡೆಗೆ ಹೆಜ್ಜೆ ಹಾಕಿದೆ.

ಸುಮಾರು ಐದುನೂರು ಕುರ್ಚಿಗಳನ್ನ ಹಾಕಿದ್ದರೂ ಅಂತ ಕಾಣುತ್ತೆ. ಸುಮಾರು ಇಪ್ಪತ್ತರಿಂದ ಮೂವತ್ತು ಕುರ್ಚಿಗಳ ಮೇಲೆ ಕೊಳಗೇರಿಯ ಮಕ್ಕಳು ಆಸೀನರಾಗಿದ್ದರು.ಬಾಕಿ ಉಳಿದ ಕುರ್ಚಿಗಳ ಮುಖದಲ್ಲಿ ಅನಾಥಭಾವ ಎದ್ದುಕಾಣುತ್ತಿತ್ತು. ಅಲ್ಲಿದ್ದ ಮಕ್ಕಳು ಕುರ್ಚಿಯ ಮೇಲೆ ಆಟವಾಡುತ್ತ ಪಕ್ಕದಲ್ಲಿಯೆ ಆಳೆತ್ತರ ನಿಲ್ಲಿಸಲಾಗಿದ್ದ ಚಿತ್ರನಟಿ ಉಮಾಶ್ರಿಯ ಕಟೌಟನ್ನ ನೋಡಿ.. “ಒ ಒ ಒ ಪುಟ್ಟಮಲ್ಲಿ” ಅನ್ನುತ್ತ ಕಟೌಟಿನ ಸುತ್ತ ಆಟವಾಡುತ್ತಿದ್ದರು. ನಿರಿಕ್ಷೆಯಷ್ಟು ಜನ ಸೇರಿಸಲಾಗದ ಸಮಾರಂಭದ ಮುಖಂಡರುಗಳ ಮುಖದಲ್ಲಿ ಯಾಕೊ ಸೂತಕದ ಕಳೆ.ಕೊನೆಗೂ ಬೆಂಗಳೂರಿನ ಅಷ್ಟೂ ಕೊಳಗೇರಿ ಮಕ್ಕಳು ಹೆಂಗಸರನ್ನೆಲ್ಲ ತುಂಬಿಕೊಂಡ ಮೂರು ಬಸ್ಸುಗಳು ಸಮಾರಂಭದ ಮುಂದೆ ಪ್ರತ್ಯಕ್ಷವಾದವು. ಸಂಘಟಕರ ಮುಖದಲ್ಲಿ ಮಂದಹಾಸ. ತಕ್ಷಣವೇ ಅಲ್ಲಿದ್ದ, ಮರಿ ರಾಜಕಾರಣಿ ಯಾರಿಗೋ ಪೋನು ಹಚ್ಚಿ” ಸಾರ್ ಎಲ್ಲ ರೆಡಿ..ನೀವು ಬರಬಹುದು” ಅಂದ ಸರಿಯಾಗಿ ಹತ್ತು ನಿಮಿಷಕ್ಕೆ ಸಮಾರಂಭಕ್ಕೆ ಬರಬೇಕಾದ ಮಹಾನುಭಾವರೆಲ್ಲ ಬಂದು ತಮ್ಮ ತಮ್ಮ ಆಸನಗಳಲ್ಲಿ ವಿರಾಜಮಾನರಾದರು.

ಗಜ ಚಿತ್ರದ “ಸಿಂಗಾರಿ ಯಾರೆ ನೀ ಬುಲ್ ಬುಲ್’ ಅಂತ ಕೀರಲು ಧ್ವನಿಯ ಗಾಯಕ ಹುಚ್ಚಾಪಟ್ಟೆ ಹಾಡುತ್ತಿದ್ದರೆ ಅಲ್ಲಿಗೆ ಬಂದಿದ್ದ ಹೆಂಗಸರು ಮಕ್ಕಳ ಕಣ್ಣುಗಳೆಲ್ಲ ಪಕ್ಕದಲ್ಲಿ ಬೇಯುತ್ತಿದ್ದ ಬಿರಿಯಾನಿಯನ್ನ ಬೇಟೆಯಾಡುತ್ತಿದ್ದವು. ಸುಮ್ಮನೆ ಹೆಂಗಸರು ಮಕ್ಕಳ ಮದ್ಯೆ ನಿಂತುಕೊಂಡು ರಾಜಕಾರಣಿಗಳ ಭಂಡಬಾಷಣವನ್ನ ಕೇಳುತ್ತಿದ್ದೆ. ಅಷ್ಟರಲ್ಲಿ ಪಕ್ಕದಲ್ಲಿಯೇ ಕುಳಿತಿದ್ದ ಹೆಂಗಸು “ ನಿಮಗೆಷ್ಟು ಕೊಟ್ರು ಅಂತ ತಮಿಳಲ್ಲಿ ಕೇಳಿದರೆ..” “ಮುಪ್ಪತ್ತಂಜಿ ಕುಡುತ್ತಾರಮ್ಮ” ಅಂದಿದ್ದು ಮತ್ತೊಬ್ಬ ಹೆಂಗಸು. ಮತ್ತೇನನ್ನೊ ಮಾತನಾಡುತಿದ್ದರೂ ನನಗೆ ತಮಿಳು ಬಾರದೆ ಸುಮ್ಮನಿರಬೇಕಾಯಿತು. ಹಾಗೆಯೆ ಹಿರಿ ಮರಿ ಕುರಿ ರಾಜಕಾರಣಿಗಳ ಭಾಷಣವಂತೂ ಮಿತಿಮಿರಿತ್ತು. ಬೇರ ಪಕ್ಷಗಳ ಮುಖಂಡರುಗಳ (ಇಲ್ಲದ) ಮಾನವನ್ನ ಹರಾಜು ಹಾಕುತ್ತ “ ಇಷ್ಟೋಂದು ಜನಸಾಗರವನ್ನ ನೋಡಿ ತುಂಬ ಕುಷಿಯಾಗ್ತ ಇದೆ. ನಮ್ಮ ಪಕ್ಷಕ್ಕೆ ಈ ಸಲ ಬಹುಮತ ಗ್ಯಾರಂಟಿ” ಹೀಗೆ ಭಾಷಣ ಮುಂದುವರಿತಾನೆ ಇತ್ತು. ಬೇರೆ ಬೇರೆ ಪಕ್ಷಗಳಿಂದ ಪಕ್ಷಾಂತರ ಮಾಡಿದ ಪುಡಾರಿಗಳಿಗೆ ಒಂದೊಂದು ಹಾರವನ್ನೂ ಹಾಕುತ್ತಿದ್ದರು. ಹಾರವನ್ನು ಹಾಕಿಸಿಕೊಂಡ ಪುಡಾರಿಗಳು ಕ್ಯಾಮರಾಗೆ ಪೋಸು ಕೊಟ್ಟು ಇಷ್ಟಗಲ ನಗುತ್ತಿರುವಾಗ ಇದರ ಮದ್ಯದಲ್ಲಿಯೆ ಬಿರಿಯಾನಿ ರೆಡಿಯಾಗಿ ಜನರೆಲ್ಲ ಹೋ……ಅನ್ನುತ್ತ ಬಿರಿಯಾನಿ ಸ್ಥಳದತ್ತ ನುಗ್ಗಿದರು. ಹಾಕಿದ್ದ ೫೦೦ ಕುರ್ಚಿಗಳು ಅನಾಥ ಮತ್ತೆ ಖಾಲಿ ಖಾಲಿ. ಬಿರಿಯಾನಿ ಮಂಟಪವೆಲ್ಲ ನೂಕುನುಗ್ಗಲಿನಿಂದ ಜೋಲಿ ಜೋಲಿ. ಸಮಾರಂಭದಲ್ಲಿದ್ದಂತಹ ಮುಖಂಡರ ಮುಖದಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತ ಇಲ್ಲವ ಅನ್ನುವ ಗೊಂದಲ.

ರಾತ್ರಿ ಯಾಕೊ ಹೊಟ್ಟೆನೋವು ಅಂತ ಊಟಮಾಡದೆ ಮಲಗಿದ್ದರ ಪ್ರಭಾವವೇನೊ ಹೊಟ್ಟೆಚುರುಗುಡುತ್ತಿತ್ತು. ಹೇಗಿದ್ರು ಅಣ್ಣಾವ್ರ ಸಿನಿಮಾಗಳ ಬಿಡುಗಡೆಯ ದಿನ ಟಿಕೇಟು ಕೌಂಟರಿನ ಮುಂದೆ ಟಿಕೇಟು ಪಡೆಯಲು ಉಪಯೊಗಿಸುತ್ತಿದ್ದ ಎಲ್ಲ ತರಾವರಿ ವಿದ್ಯೆಗಳನ್ನ ಉಪಯೋಗಿಸಿ ಅಲ್ಲಿದ್ದ ಕೊಳಗೇರಿ ಹೆಂಗಸು ಮಕ್ಕಳ ಮೇಲೆಲ್ಲ ಯುದ್ಧಸಾರಿದವನಂತೆ ಸವಾರಿ ಮಾಡುತ್ತ ಹೊಟ್ಟೆಬಿರಿಯೆ ಬಿರಿಯಾನಿ ತಿಂದು ರೂಮಿನ ಕಡೆ ಹೆಜ್ಜೆ ಹಾಕಿದೆ. ಹೆಜ್ಜೆಯೇನೋ ಹಾಕುತ್ತಿದ್ದೆ, ಆದರೆ ನನ್ನ ಕಾಲುಗಳಲ್ಲಿ ಚಪ್ಪಲಿಗಳೇ ಇರಲಿಲ್ಲ.

5 Responses to “ಒಂದು ಭಾನುವಾರದ ಕಥೆ”

  1. kone konege sakatt nagu ne band bidthu…rajakaaranigala jana serisuva kaleyanna janarige gottago haage heliddiri…tumba tumba chennagide

    sagari - April 21, 2008 at 9:59 am

  2. ಸಕತ್ತಾಗಿದೆ ಕಣ್ರಿ, ಕರ್ನಾಟಕದಲ್ಲಿ ಇಲ್ಲದೆ ಇರೋದ್ರಿಂದ ಚುನಾವಣಾ ನಾಟಕವನ್ನು ಸಕತ್ ಮಿಸ್ಸ್ ಮಾಡ್ತಾಯಿದಿನಿ.

    ಪ್ರೀತಿಯಿರಲಿ

    ಶೆಟ್ಟರು, ಮುಂಬಯಿ

    ಶೆಟ್ಟರು (Shettaru) - April 22, 2008 at 4:22 am

  3. biryani otte tumbanadru sikthallva… nange kushi agtide.. avthu Nastha adru aithalva antha….

    regards
    Veena

    Veena - May 28, 2008 at 11:06 am

  4. I missed election time.I like your writing.
    Thanks
    Manjunath
    Amman Jordan.

    Manjunath Jordan Country - June 29, 2008 at 4:44 pm

  5. ನನಗೆ ಅನ್ಸುತ್ತೆ, ನೀವು ಈ ಚುನಾವಣೆಯ ಮುಖ ದರ್ಶನ ಮಾಡುತ್ತಿದ್ದಿರೇನೊ, ಹೇಗಾದರಾಗಲಿ ನಿಜ ಸ೦ಗತಿ ಹೇಳುವ ಪ್ರಯತ್ನ ಮಾಡಿದ್ದಕ್ಕೆ ಧನ್ಯವಾದಗಳು.
    ಮ೦ಜುನಾಥ ಬಸರವಾನಿ ತೀರ್ಥಹಳ್ಳಿ.
    ಅಮ್ಮನ್ ಜೋರ್ಡಾನ್ ದೇಶ.

    Manjunath Jordan Country - June 29, 2008 at 4:49 pm

Leave a Reply