ಅದೊಂದು ದೊಡ್ಡ ಸಂಸಾರ..೫ ಜನ ಅಣ್ಣತಮ್ಮಂದಿರು ಮತ್ತೆ ೪ ಅಕ್ಕ ತಂಗಿಯರು. ಹಾಗಂತ ಆನಂದ ಸಾಗರವೇನು ಅಲ್ಲ…ಕಿತ್ತಾಟ ಮುನಿಸು ಒಳಜಗಳಗಳು ಕೋಪ ಒಬ್ಬರನ್ನೊಬ್ಬರು ಹೀಯಾಳಿಸುವುದು ಅಣ್ಣತಮ್ಮಂದಿರಲ್ಲೆ ಕತ್ತಿ ಮಸೆಯುವುದು ಒಬ್ಬರನ್ನೊಬ್ಬರು ತುಳಿಯುವುದು ಮಾಮೂಲೆ..ಇಷ್ಟೆಲ್ಲ ಒಳಜಗಳಗಳಿದ್ದರೂ ಅ ಕುಟುಂಬ ಈ ತನಕ ಅವಿಭಕ್ತ ಕುಟುಂಬವಾಗಿದ್ದರ ಬಗ್ಗೆ ನನಗೆ ಅಭಿಮಾನ ಮತ್ತು ಆಶ್ಚರ್ಯ ಮತ್ತು ಒಂದು ತರನಾದ ನಿಗೂಢತೆ ಇನ್ನು ನನ್ನ ಮನಸ್ಸಿನಿಂದ ಮರೆಯಾಗಿಲ್ಲ..ಅವರು ಕಿತ್ತಾಡುತ್ತಿರುವುದರ ಹಿಂದೆ ಅವರು ಅನಕ್ಷರಸ್ತರಾದ ಒಂದು ಕಾರಣವಿರಬಹುದು ಮತ್ತು ಇಲ್ಲಿಯವರೆಗೆ ಆ ಮನೆಯು ಅವಿಭಕ್ತ ಕುಟುಂಬವಾಗೆ ಇದ್ದುದ್ದರ ಹಿಂದೆ ಮನೆಯ ಹಿರಿಯಪ್ಪ ನ ಮುಗ್ಧತೆ ಮತ್ತು ಪ್ರಾಮಾಣಿಕತೆಯಿರಲೂಬಹುದು…

ಹಿರಯಪ್ಪ ಮನೆಯ ಹಿರಿಯ ಸದಸ್ಯ ಅನಕ್ಷರಸ್ತ ಶಾಲೆಯ ಮೆಟ್ಟಿಲು ಹತ್ತಿದವನಲ್ಲ.. ಅವನಾಯಿತು ಅವನ ಮನೆಯಾಯಿತು ತನ್ನ ಮಕ್ಕಳಾಯಿತು ಹಾಗು ಅವನ ಅವಿವೇಕಿ ಹೆಂಡತಿಯಾಯಿತು.. ಇಷ್ಟರಲ್ಲೆ ತನ್ನ ಸುಖ? ಸಂತೋಷ?ಗಳನ್ನು ಕಂಡುಕೊಂಡ ಅಲ್ಪ ಸಂತೋಷಿ.. ಊರ್‍ಇನಲ್ಲಿ ಹಿರಿಯಪ್ಪನಿಗೆ ಒಳ್ಳೆಯ ಹೆಸರಿದ್ದರೂ ಕೆಲವೊಮ್ಮೆ ಅವನು ಕುಡಿದು ಆಡುವ ರೀತಿಯಿಂದ ಒಂದೊಂದು ಸಲ ಜನರ ಹಾಳು ಬಾಯಿಗೆ ಅಹಾರವಗುತ್ತಿದ್ದ…ದಿನಪೂರ್ತಿ ಕಷ್ಟಪಟ್ಟು ಕೆಲಸ ಮಾಡಿ ಸಂಜೆ ಸ್ವಲ್ಪ ಹುಳಿ ಹೆಂಡವಾದರೆ ಸಾಕು ಕಂಠಪೂರ್ತಿ ಕುಡಿದು ಮಲಗಿಬಿಡುತ್ತಿದ್ದ… ಅವನಿಗೊಬ್ಬಳು ಶೂರ್ಪನಖಿಯಂತ ಹೆಂಡತಿ, ಅವನ ಅಷ್ಟೂ ದೌರ್ಬಲ್ಯಗಳ ಪ್ರತಿರೂಪವೇನೋ ಅನ್ನುವಂತ ಹೆಂಗಸು..ಗಂಡ ಹೆಂಡತಿಯಲ್ಲಿ ಅಷ್ಟೇನು ಒಳಜಗಳಗಳಿಲ್ಲದಿದ್ದರು ಆ ಅವಿಭಕ್ತ ಕುಟುಂಬಕ್ಕೆ ತಕ್ಕ ಸೊಸೆ ಅವಳಾಗಿರಲಿಲ್ಲ… ಮನೆಯ ಸದಸ್ಯರೂ ಅಷ್ಟೆ ಅವನ ಎಲ್ಲಾ ದೌರ್ಬಲ್ಯಗಳನ್ನು ಸರಿಯಾಗಿ ಬಳಸಿಕೊಳ್ಳುತಿದ್ದರು.. ಕತ್ತೆಯ ಹಾಗೆ ದುಡಿಯುವ ಒಬ್ಬ ಅಣ್ಣ ಅವರಿಗೆ ಸಾಕಾಗಿತ್ತು..

ಹಾಗಂತ ಅವರ್‍ಏನು ಅಂತಾ ಸ್ಥಿತಿವಂತರೇನು ಅಲ್ಲ.. ಇದ್ದಿದ್ದು ೫ ಎಕೆರೆ ಜಮೀನು ಅದರಲ್ಲಿ ೫ ಜನ ಅಣ್ಣತಮ್ಮಂದಿರು..ಹಿರಿಯಪ್ಪನೇ ಕಷ್ಟಪಟ್ಟು ನಾಲ್ಕು ಜನ ತಂಗಿಯರ ಮದುವೆ ಮಾಡಿದ[ ಒಬ್ಬನೇ ಮಾಡದಿದ್ದರು ಹೆಚ್ಚಿನ ಪಾಲು ಅವನದಿತ್ತು]..ತನ್ನ ತಂಗಿಯರನ್ನ ಒಳ್ಳೆಯ ಕಡೆ ಸೇರಿಸಿದ ಬಗ್ಗೆ ಅವನಿಗೆ ಹೆಮ್ಮೆ ಇತ್ತು..ಊರಲ್ಲೂ ಕೂಡ ಜನ ಮಾತಾಡಿಕೊಳ್ತ ಇದ್ರು ..ಇದ್ರೆ ಇಂತ ಅಣ್ಣ ಇರಬೇಕು ಅಂತ… ಆದರೆ ಅವನ ಹೆಂಡತಿಗೆ ಸ್ವಲ್ಪ ಹೊಟ್ಟೆ ಉರಿ ಎಲ್ಲ ನನ್ನ ಗಂಡ ಮಾಡಿದ ತನಗಾಗಿ ಏನೂ ಮಾಡಲಿಲ್ಲವೆಂದು..ಹಾಗಂತ ತನ್ನ ಹೆಂಡರು ಮಕ್ಕಳನ್ನ ಅವನು ಯಾವತ್ತು ಉಪವಾಸವಿಡಲಿಲ್ಲ. ತನಗಿದ್ದ ೨ ಹೆಣ್ಣುಮಕ್ಕಳನ್ನೂ ಊರಿನಲ್ಲಿ ಶಾಲೆಯಿದ್ದರೂ ಪಕ್ಕದೂರಿನ ಒಳ್ಳೆಯ ಶಾಲೆಗೆ ಸೇರಿಸಿದ್ದ. ತನ್ನಂತೆ ತನ್ನ ಮಕ್ಕಳಾಗಬಾರದೆಂದು.. ೨ ಹೆಣ್ಣು ಮಕ್ಕಳಾದಾಗ ಹಿರಿಯಪ್ಪ ನನಗೆ ಸಾಕು ಲಕ್ಷಿ ತರ ನನ್ನ ೨ಹೆಣ್ಣುಮಕ್ಕಳಿದ್ದಾರೆ ನನಗಿನ್ನು ಮಕ್ಕಳೇ ಬೇಡವೆಂದು ತೀರ್ಮಾನಿಸಿದ್ದ…ತನ್ನ ಹೆಂಡತಿ ೩ ನೇ ಮಗೂವಾದರೂ ಗಂಡಾಗಬಹುದು ಎಂದು ಅಂಗಾಲಾಚಿದರು, ಹಿರಿಯಪ್ಪ ಪಕ್ಕದೂರಿನ ಅಸ್ಪತ್ರೆಯಲ್ಲಿ ಅವನೊಬ್ಬನೇ ಹೋಗಿ ಸಂತಾನಹರಣ ಚಿಕಿತ್ಸೆಮಾಡಿಸಿಕೊಂಡು ಬಂದಿದ್ದ..ಅವನಿಗಿದ್ದ ಒಂದೇ ಬಯವೆಂದರೆ ಮತ್ತೂ ಒಂದು ಹೆಣ್ಣಾದರೆ ಏನೂ ಮಾಡುವುದು?..

ದಿನದಿಂದ ದಿನಕ್ಕೆ ಮನೆಯಲ್ಲಿ ಒಳಜಗಳಗಳು ಶುರುವಾದಂತೆ ಹಿರಿಯಪ್ಪ ಖಿನ್ನನಾಗುತ್ತಿದ್ದ.. ಜೊತೆಗೆ ಹೆಂಡತಿ ಬೇರೆಯಾಗುವಂತೆ ಒತ್ತಡ ತರೋಕೆ ಶುರು ಮಾಡ್ತ ಇದ್ಲು.. ಮನೆಯವರಿಗೂ ಇದೇ ಬೇಕಾಗಿತ್ತು..ಎಲ್ಲ ಅಣ್ಣ-ತಮ್ಮಂದಿರ ಮನೆಯಲ್ಲಿರುವಂತೆ ಇಲ್ಲು ಒಳಜಗಳಗಳಿದ್ದರೂ ಹಿರಿಯಪ್ಪನನ್ನ ಅಷ್ಟೋಂದು ದೂರ ಮಡೋದಿಕ್ಕೆ ಅವರಿಗೂ ಕಾರಣಗಳಿರಲಿಲ್ಲ…ಆದರೆ ಅವರಿಗೆ ದೂರಾಲೋಚನೆ..ಎಲ್ಲಿ ಹಿರಿಯಪ್ಪ ತನ್ನ ೨ ಹೆಣ್ಣುಮಕ್ಕಳನ್ನ ಈ ಮನೆಯ ಕರ್ಚಿನಲ್ಲೆ ಮದುವೆ ಮಾಡಿಬಿಡುತಾನೊ ಎಲ್ಲಿ ಎಲ್ಲಾ ಸಾಲವನ್ನು ನಾವೇ ತೀರಿಸಬೇಕಾಗಿ ಬರುವುದೋ ಎಂಬ ಆತಂಕ ಅವರಲ್ಲಿ ಮನೆಮಾಡಿತ್ತು…..ಹಾಗಾಗಿಯೆ ಒಂದೆರೆಡು ಸಲ ಜಗಳಗಳೂ ವಿಪರೀತವಾದಾಗ ಹಿರಿಯಪ್ಪನನ್ನ ಅವನ ೨ ಜನ ತಮ್ಮಂದಿರೂ ಹೊಡೆದಿದ್ದು ಇದೆ….

ದಿನದಿಂದ ದಿನಕ್ಕೆ ಮನೆಯ ವಾತಾವರಣ ಹದಗೆಟ್ಟಂತೆ ಹಿರಿಯಪ್ಪ ಖಿನ್ನನಾಗುತ್ತಿದ್ದ..ಜಗಳಗಳಿಂದ ನನ್ನನ್ನೆಲ್ಲಿ ಈ ಮನೆಯಿಂದ ದೂರಮಾಡಿಬಿಡುತ್ತಾರೋ ನನ್ನ ಎರೆಡು ಹೆಣ್ಣುಮಕ್ಕಳ ಪಾಡೇನೋ ಅನ್ನುವ ಚಿಂತೆಗೆ ಬಿದ್ದ ಹಿರಿಯಪ್ಪ ವಿಪರೀತ ಕುಡಿಯುತ್ತಿದ್ದ..ಕುಡಿದು ಅಣ್ಣ-ತಮ್ಮಂದಿರ ಜೊತೆಗೆ ಜಗಳವಾಡುತ್ತಿದ್ದ…ಅವನ ಹೆಂಡತಿಯೂ ಅಷ್ಟೆ ಮನೆಯಲ್ಲಿದ್ದ ಅಷ್ಟು ಜನರ ಹತ್ತಿರ ಜಗಳವಾಡಿಕೊಂಡ್ದಿದಳು..ಒಂದು ದಿನ ಕೊನೆಗೆ ಜಗಳ ವಿಪರೀತವಾದಾಗ ಮನೆಯವರೆಲ್ಲರೂ ಸೇರಿ ಮನೆಯಿಂದ ಹೊರಗೆ ಹಾಕಿ ಬಿಟ್ರು..ಇದ್ದ ಐದು ಎಕೆರೆ ಜಮೀನಿನಲ್ಲಿ ಒಂದು ಎಕರೆ ಜಮೀನನ್ನು ಅವನ ಹೆಸರಿಗೆ ಬರೆಯಿಸಿ ಮನೆಯಿಂದ ಹೊರಗೆ ಹಾಕಿಬಿಟ್ರು..ಹಿರಿಯಪ್ಪನನ್ನ ಮನೆಯಿಂದ ಹೊರಗೆ ಹಾಕಿದ್ದೇನೋ ನಿಜ..ಆದರೆ ಅವನಿಗೆ ಇರೋಕೆ ಅಂತ ಮನೆ ಎಲ್ಲಿತ್ತು? ಇದ್ದ ಚಿಕ್ಕ ಮನೆಯಲ್ಲಿ ನಾನೆಂತ ಪಾಲು ಕೇಳುವುದು? ನನ್ನ ಅಣ್ಣ-ತಮ್ಮಂದಿರೆ ಇರಲಿ ಬಿಡು ಅಂದು ಕೊಂಡು ತಾನು ಊರ ಹೊರಗೆ ಒಂದು ಚಿಕ್ಕ ಗುಡಿಸಲು ಕಟ್ಟಿಕೊಂಡು ಹೆಂಡತಿಮಕ್ಕಳೊಡನೆ ಅವನ ಪಾಡಿಗೆ ಅವನಿದ್ದ..

ಮನೆಯಿಂದ ಹೊರಬಿದ್ದವನೇನು ಸುಮ್ಮನಿರಲಿಲ್ಲ..ಮನೆಪಕ್ಕದಲ್ಲಿದ್ದ ದಟ್ಟಾನುದಟ್ಟ ಕಾಡನ್ನು ಕಡಿದು ಅಲ್ಲಿ ವ್ಯಾವಸಾಯ ಮಾಡೋಕೆ ಶುರುಮಾಡಿದ..ಕಷ್ಟ ಪಟ್ಟು ತನ್ನದೇ ಅಂತ ಮನೆ ಮಾಡಿದ. ಇದ್ದ ಒಂದು ಎಕರೆ ಜಮೀನಿನಲ್ಲೆ ತನಗಾಗುವಷ್ಟು ಅನ್ನವನ್ನ ಸಂಪಾದಿಸಿಕೊಳ್ಳುತ್ತಿದ್ದ.ಮನೆಯಿಂದ ಹೊರಗಿದ್ದರೂ ತನ್ನ ಮನೆಯ ಅಪ್ಪ ಅಮ್ಮನ ಅಣ್ಣತಮ್ಮಂದಿರ ಬಗ್ಗೆ ಸ್ವಲ್ಪವೂ ಪ್ರೀತಿ ಕಡಿಮೆಯಾಗಿರಲಿಲ್ಲ…ಅವನಿಗಿದ್ದ ಒಂದೇ ಚಿಂತೆಯೆಂದರೆ ತನ್ನ ೨ ಹೆಣ್ಣುಮಕ್ಕಳನ್ನ ಮದುವೆ ಮಾಡುವುದು ಹೇಗೆ? ಅದರ ಜೊತೆಗೆ ಹೆಂಡತಿಯೂ ಆಗಾಗ ವಿಪರೀತಿ ಜಗಳ ಆಡ್ತ ಇದ್ಲು..ಅವಳಿಗೆ ಜಗಳ ಆಡೋಕೆ ಕಾರಣಗಳೇ ಇರಲಿಲ್ಲ…ನಿಜಕ್ಕೂ ಹೇಳಬೇಕೆಂದರೆ ಅವಳಿಗೆ ಜಗಳ ಆಡೋಕೆ ಕಾರಣವೇ ಬೇಕಾಗಿರಲಿಲ್ಲ ಅಂತ ಹೆಂಗಸು…ಗಂಡ ಹೆಂಡತಿಯ ಜಗಳಗಳಾದಗ ಹಿರಿಯಪ್ಪ ವಿಪರೀತ ಕುಡಿಯುತ್ತಿದ್ದ..ಕುಡಿದ ಅಮಲಿನಲ್ಲಿ ಹೆಂಡತಿ ಮಕ್ಕಳಿಗೆ ಒಂದೆರೆಡು ಮಾತು ಬೈಯ್ಯುತ್ತಿದ್ದನೇ ವಿನಹ ಕೈಮಾಡೊ ನೀಚ ಗುಣದವನಾಗಿರಲಿಲ್ಲ. ಕುಡಿದು ಬಂದರೆ ತನ್ನ ಪಾಡಿಗೆ ತಾನು ಏನಾದರು ಮಾತಾಡಿಕೊಂಡು ಅಳುತ್ತ ಕೂರುತ್ತಿದ್ದವನು ಒಂದೊಂದು ಸಲ ಜೋರಾಗಿ ಹೆಂಡತಿಗೆ ಬಯ್ಯುತ್ತಿದ್ದ…”ನಿನ್ನಿಂದಲೇ ನನ್ನ ಅಣ್ಣ-ತಮ್ಮಂದಿರು ನನ್ನಿಂದ ದೂರಾದರು …ನಾನು ವಿಷ ಕುಡಿದು ಸತ್ತೋಗ್ತೀನಿ” ಅಂತ ಒಂದೋದು ಸಲ ಜೋರಾಗಿ ಕೂಗ್ತ ಇದ್ದ…..ಹಿರಿಯಪ್ಪ ಜಗಳವಾಡಿದಾಗಲೆಲ್ಲ ಆ ನೀಚ ಹೆಂಗಸು ತವರುಮನೆಗೆ ಹೋಗಿ ಬಿಡ್ತ ಇದ್ಲು…ಮತ್ತೆ ಇವನೇ ನಾಚಿಕೆ ಬಿಟ್ಟು ಹೋಗಿ ಕರೆದುಕೊಂಡು ಬರುತ್ತ ಇದ್ದ…ಬಂದವಳೆ ಮತ್ತೆ ಗಲಾಟೆ ಶುರುಮಾಡ್ತ ಇದ್ಲು….

ದಿನದಿಂದ ದಿನಕ್ಕೆ ಹಿರಿಯಪ್ಪನ ಹೆಂಡತೀ ಕೂಡ ಖಾಯಿಲೆ ಬಿಳೋಕೆ ಶುರು ಮಾಡಿದ್ಲು..ಅವಳ ಕೈಮೇಲೆ ವಿಚಿತ್ರ ಹುಣ್ಣುಗಳಾಗುತ್ತ ಬಂದ್ವು…ಅವಾಗ ನೋಡಬೇಕಿತ್ತು ಹಿರಿಯಪ್ಪನ ಹೆಂಡತಿ ಮೇಲಿನ ಪ್ರೀತಿ..ಎಲ್ಲೆಲ್ಲಿ ಸಾದ್ಯವಾಗುತೊ ಅಲ್ಲಿಗೆಲ್ಲ ತನ್ನ ಹೆಂಡತಿಯನ್ನ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದ… ಗಾಯಗಳೇನೊ ವಾಸಿಯಾದರೂ ಮೊದಲಿನ ಹಾಗೆ ಕೆಲಸ ಮಾಡೋಕೆ ಆಗುತ್ತಿರಲಿಲ್ಲ.. ಸರಿಯಾಗಿ ನಡೆದಾಡಲಾಗುತ್ತಿರಲಿಲ್ಲ..ಒಂದೋಂದು ಸಲ ಅಡುಗೆಮಾಡುವುದು ಕಷ್ಟಾವಾಗುತ್ತಲಿತ್ತು ಹಿರಿಯಪ್ಪನ ಹೆಂಡತಿಗೆ. ಆವಾಗಲೆಲ್ಲ ತಾನೆ ಅಡುಗೆ ಮಾಡಿ ತನ್ನ ಮಕ್ಕಳು ಮತ್ತೆ ಹೆಂಡತಿಗೆ ಬಡಿಸುತ್ತಿದ್ದ…ತನ್ನ ಹೆಣ್ಣುಮಕ್ಕಳ ಮೇಲೆ ಅದೆಷ್ಟು ಪ್ರೀತಿಯೋ ಗೊತ್ತಿಲ್ಲ..ಮಕ್ಕಳು ಅಷ್ಟು ಚಿಕ್ಕವರಲ್ಲದಿದ್ದರೂ ತಾನೆ ತಲೆ ಬಾಚಿ ಶಾಲೆಗೆ ಕಳಿಸುತ್ತಿದ್ದ…ಮೊದಲಿನ ಹಾಗೆ ಮನೆಯಲ್ಲಿ ಜಗಳಗಳಿರಲಿಲ್ಲ ಜಗಳ ಮಾಡೋಕೆ ಯಾರಿದ್ದಾರೆ ಅಲ್ಲಿ? ರೋಗಿಷ್ಟ ಹೆಂಡತಿಯ ಹತ್ತಿರ ಏನು ಜಗಳ ಆಡಿಯಾನು? ಅವಳಾದರು ಯಾಕೆ ಜಗಳ ಆಡಿಯಾಳು? ಹೀಗೆ ಅವಳು ಕಷ್ಟ ಪಟ್ಟು ಮನೆಕೆಲಸ ನೋಡಿಕೊಂಡರೆ ಇವನು ತನ್ನ ಜಮೀನು ಕೆಲಸ ನೋಡಿಕೊಳ್ಳುತ್ತಿದ್ದ….

ಮನುಷ್ಯ ಒಂದೊಂದು ಸಲ ಎಷ್ಟು ಬಲಹೀನನಾಗಿಬಿಡುತ್ತಾನೆಂದರೆ ಅದನ್ನ ಕಲ್ಪನೆ ಮಾಡಿಕೊಳ್ಳುವುದು ಕಷ್ಟವಾಗಿ ಬಿಡುತ್ತದೆ..ಕೆಲವೊಂದು ಸಂದರ್ಭಗಳಲ್ಲಿ ತಾನೇನು ಮಾಡುತ್ತಿದ್ದೇನೆ ಎಂಬ ಅರಿವಿದ್ದರು ಕೆಲವು ಪ್ರಮಾದಗಳಾಗಿಬಿಡುತ್ತವೆ…ಆ ತಪ್ಪುಗಳಿಗೆ ಯಾರು ಹೊಣೆ? ಮನುಷ್ಯ ತಾನು ಮಾಡಿದ ತಪ್ಪುಗಳು ಬೇರೆಯವರ ಮೇಲೆ ಯಾವ ಪರಿಣಾಮ ಬೀರುತ್ತವೆ ಅಂತ ಯೋಚನೇ ಕೂಡ ಮಾಡುವುದಿಲ್ಲ… ಯಾವುದೋ ದುಶ್ಚಟಗಳ ದಾಸರಾಗಿ ಯಾರಿಗೋ ನೋವು ಕೊಟ್ಟು ಯರದೋ ಮನೆಯ ಸರ್ವನಾಶಕ್ಕೆ, ಅಥವ ಕೆಲವೊಂದು ಸಲ ತನ್ನ ಮನೆಯ ಅವನತಿಗೇ ತಾನೆ ಕಾರಣವಾಗಿಬಿಡುತ್ತಾನೆ. ಅದಕ್ಕೆ ಈ ಹಿರಿಯಪ್ಪ ಸೂಕ್ತ ಉದಾಹರಣೆ……..

ಹೀಗಿದ್ದಾಗಲೇ ಒಂದು ದಿನ ಕಂಟಪೂರ್ತಿ ಕುಡಿದು ಬಂದು ..ಹೆಂಡತಿಗೆ ಊಟಕ್ಕೆ ಬಡಿಸಲು ಹೇಳಿದ್ದಾನೆ.. ತುಂಬಾ ರಾತ್ರಿಯಾಗಿದ್ದರಿಂದ ಹೆಂಡತಿ ಗಂಡನಿಗೆ ಊಟ ಬಡಿಸಿ ಹೋಗಿ ಮಲಗಿದ್ದಾಳೆ… ೨ ಹೆಣ್ಣುಮಕ್ಕಳು ತಮ್ಮ ಪಾಡಿಗೆ ತಾವು ಏನನ್ನೋ ಓದಿಕೊಳ್ಳುತ್ತ ಕೂತಿವೆ.. ಹಿರಿಯಪ್ಪ ಊಟದ ಮದ್ಯೆ ನೀರು ಕೇಳಿದ್ದಾನೆ..ಪಾಪ ಮಕ್ಕಳು ನೀರು ತರುವುದು ಸ್ವಲ್ಪ ಸಮಯವಾಗಿದ್ದೇ ತಡ..ಜೋರಾಗಿ ಕೂಗಾಡುತ್ತಾ..”ಈ ಮನೆಯಲ್ಲಿ ನನ್ನ ಕಂಡರೆ ಯಾರಿಗೂ ಅಗೋಲ್ಲ ನನಗೆ ಒಂದು ಲೋಟ ನೀರು ಕೊಡುವವರು ಈ ಮನೆಯಲ್ಲಿ ದಿಕ್ಕಿಲ್ಲ ನಾನು ವಿಷ ಕುಡುಯುತ್ತೇನೆ” ಅಂದವನೇ ಜಮೀನಿಗೆ ಸಿಂಪಡಿಸಲೂ ಅಂತ ತಾನೆ ಇಟ್ಟಿದ್ದ ಕಳೆನಾಶಕ[ವಿಷ]ವನ್ನ ಕುಡಿದ ಅಮಲಿನಲ್ಲಿ ಕಠಪೂರ್ತಿ ಕುಡಿದು ಬಿಟ್ಟ……..

ಮೊದಲೇ ನಮ್ಮದು ಒಂದು ಚಿಕ್ಕ ಹಳ್ಳಿ.ಅಲ್ಲಿ ಯಾವ ಆಸ್ಪತ್ರೆಯಾಗಲಿ ಪ್ರಥಮ ಚಿಕಿತ್ಸೆಗೆ ಅನುಕೂಲವಾಗುವಂತ ಯಾವುದೇ ವ್ಯವಸ್ತೆಯಾಗಲಿ ಇಲ್ಲ…ಮದ್ಯೆರಾತ್ರಿ ಪಕ್ಕದೂರಿನ ಆಟೊ ಮಾಡಿಕೊಂಡು ಪಕ್ಕದೂರಿನ ಆಸ್ಪತ್ರೆಗೆ ತೆಗೆದುಕೊಂಡು ಹೋದರೆ ಅಲ್ಲಿ ವಿಷ ಕುಡಿದವರನ್ನ ಬದುಕಿಸಬಲ್ಲ ಔಷದಿಗಳಾಗಲಿ ಇಲ್ಲ. ನರಸತ್ತ ಸರ್ಕಾರಿ ಆಸ್ಪತ್ರೆಯಲ್ಲಿ. ಕೇವಲ ನರಸತ್ತ ವೈದ್ಯಮಹಾಶಯರೇ ಇರೋದು..ಮತ್ತೆ ಅದೇ ದಿನ ರಾತ್ರಿ ಶಿವಮೊಗ್ಗದ ಒಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸೋಕೆ ಅಂತ ಕರೆದುಕೊಂಡು ಹೋದರೆ ಅಲ್ಲಿಯಾಗಲೆ ಹಿರಿಯಪ್ಪ ಅರೆಜೀವವಾಗಿದ್ದ… ಅಲ್ಲಿನ ಬೇವರ್ಸಿ ಡಾಕ್ಟರ್ ಕೂಡ, ೨ ದಿನ ಆಸ್ಪತ್ರೆಯಲ್ಲಿ ಇಟ್ಟುಕೊಡು ಹದಿನೆಂಟು ಸಾವಿರ ಬಿಲ್ ಮಾಡಿ, ಆಮೇಲೆ ಬದುಕುವುದಿಲ್ಲವೆಂದು ಹೇಳಿ ಮತ್ತೆ ಹಿರಿಯಪ್ಪನ ಹೆಂಡತಿ ಮಕ್ಕಳ ಮೇಲೆ ಅಷ್ಟೂ ಸಾಲದ ಹೊರೆ ಹಾಕಿ ಬಿಟ್ರು… ಮತ್ತೆ ಸಾಗರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಕೊಡಿಸೋಷ್ಟರಲ್ಲಿ ಹಿರಿಯಪ್ಪ ಬಾಗಶ: ಶವವಾಗಿದ್ದ…. ಈ ಸಲ ಊರಿಗೇ ಹೋಗಿದ್ದಾಗ ಊರಿನ ಹುಡುಗರನ್ನೆಲ್ಲ ಕರೆದುಕೊಂಡು ಕೊನೆಯ ಬಾರಿಗೆ ಹಿರಿಯಪ್ಪನನ್ನ ನೋಡಿ ಬರಲು ಹೋಗಿದ್ದೆ…..ಆಸ್ಪತ್ರೆಗೆ ಹೋಗಿ ಚಿಕ್ಕಪ್ಪಾ………… ಯಾಕೆ ನೀನು ವಿಷ ಕುಡಿದು ನಿನ್ನ ಹೆಂಡತಿ ಮಕ್ಕಳಿಗೆ ವಿಷ ಕೊಟ್ಟೆಯೊ ಪಾಪಿ……….ಅಂತ ಕೇಳಿದರೆ ಎಲ್ಲಿ ಹಿರಿಯಪ್ಪ? ಕೇವಲ ಕಣ್ಣಲ್ಲಿ ನೀರು ತುಂಬಿಕೊಂಡು ಆಕಾಶ ನೋಡುತ್ತಿದ್ದ…ಮೈ ಕೈ ಎಲ್ಲ ಬಾತುಕೊಂಡು ಕಲ್ಲಿನ ತರ ಕಠಿಣವಾಗಿದ್ದವು..ಹಿರಿಯಪ್ಪನೂ ಕಲ್ಲಿನ ತರಾನೆ..ಯಾವುದೇ ಕಷ್ಟ ಬಂದ್ರು ಹೆದರದೆ ತನ್ನ ಸಂಸಾರವನ್ನ ಒಂದು ಹಂತಕ್ಕೆ ತಂದಿಟ್ಟಿದ್ದ…..ಆಸ್ಪತ್ರೆಯಿಂದ ಹೊರಗೆ ಹೊರಟ ನಮ್ಮನ್ನೆಲ್ಲ ನೋಡಿ ಏನೋ ಮಾತಾಡೊಕೆ ಅಂತ ಹೊರಟರೆ ಬಾಯಿಂದ ಬರಿ ಗಾಳೀ ಬರ್ತ ಇತ್ತು..ಕೊನೆ ಸಲ ಹಿರಿಯಪ್ಪನನ್ನ ಕಣ್ಣುತುಂಬ ನೋಡಿಕೊಡು ಮನೆಗೆ ಹೋದ ೨ ನೆ ದಿನಕ್ಕೆ ಸುದ್ದಿ ಬಂತು….

ಹಿರಿಯಪ್ಪ ಸತ್ತೊದ್ನಂತೆ…………………………….

ಅದಕ್ಕೆ ನಾನು ಈ ಘಟನೆಗೆ “ಒಂದು ಮನೆಯ ದೀಪವಾರಿದ ಕತೆ” ಅಂತ ಹೆಸರಿಟ್ಟಿದ್ದು… ಅಷ್ಟು ಕಷ್ಟ ಪಟ್ಟು, ಮನೆಯವರನ್ನೆಲ್ಲ ಎದುರುಹಾಕಿಕೊಂಡು, ಮನೆಯನ್ನು ಕಟ್ಟಿ, ಮಕ್ಕಳನ್ನು ಸಾಕುತ್ತ, ತಾನು ಕಷ್ಟಪಟ್ಟು ಕೆಲ್ಸ ಮಾಡಿಕೊಂಡಿದ್ದ ಹಿರಿಯಪ್ಪನನ್ನ ಕೇವಲ ಒಂದು ನಿಮಿಷದ ಮೈಮರೆವು ಬಲಿತೆಗೆದುಕೊಂಡು ಬಿಡ್ತು…. ಹಿರಿಯಪ್ಪನೇನೊ ಸತ್ತ…ಅವನ ಹೆಂಡತಿಯ ಗತಿ? ತನ್ನ ಜೀವವೆಂದೆ ನಂಬಿದ್ದ ೨ ಹೆಣ್ಣುಮಕ್ಕಳ ಗತಿ? ಉತ್ತರಿಸಬೇಕಾದ ಹಿರಿಯಪ್ಪ ಎಲ್ಲಿದ್ದಾನೊ… ಸಾವುಗಳಿಗೆ ನಿಯತ್ತಿರೋದಿಲ್ಲ ಅಂತ ನನ್ನ ಅನಿಸಿಕೆ.ಹಿರಿಯಪ್ಪನ ಬಡಕುಟುಂಬವನ್ನ ನೆನೆಸಿಕೊಂಡರೆ ಯಾಕೋ ಕಣ್ಣುತುಂಬಿಬರುತ್ತೆ. ಅಪ್ಪ ಸತ್ತಾಗ ಆ ಹೆಣ್ಣುಮಕ್ಕಳೂ ಅಪ್ಪನ ಕುಯ್ದಿಟ್ಟ ದೇಹದ ಮೇಲೆ ಬಿದ್ದುಹೊರಲಾಡುತ್ತಿದ್ದುದ್ದನ್ನ ನೆನಸಿಕೊಂಡರೆ ಯಾಕೊ ಹಿರಿಯಪ್ಪನನ್ನ ರಟ್ಟೆ ಹಿಡಿದು ಕೇಳಬೇಕೆನಿಸುತ್ತೆ…..ಈ ಪಾಪದ ಮಕ್ಕಳೇನು ಮಾಡಿದ್ದವು? ಯಾವ ತಪ್ಪಿಗಾಗಿ ಇಂತ ಶಿಕ್ಷೆ.? ಯಾರ ತಪ್ಪಿಗಗಿ? ಉತ್ತರ ಕೊಡಬೇಕಾದ ಮಹಾನುಭಾವ ಸತ್ತು ಮಲಗಿದ್ದ…ಬದುಕುಳಿದ ಪಾಪಿ ಹೆಂಡತಿ ಮತ್ತು ಪಾಪದ ಮಕ್ಕಳ ಮುಖದಲ್ಲಿ ತಬ್ಬಲಿತನವೆಂಬುದು ಮನೆಮಡಿತ್ತು…