ಇವನಿದ್ದಾನಲ್ಲ ಇವನು
ನನ್ನ ಮಾತೆಲ್ಲ ಸೊಗಸಂತೆ..
ನನ್ನ ಮುದ್ದಿನ ಹುಡುಗನಲ್ಲವ
ಸರಿ ಇವತ್ತೆಲ್ಲ ಹೇಳಿ ಹಗುರಾಗಬೇಕೆಂದು
ಬಾಯಿ ತೆರೆದೆ ನೋಡಿ..! ತುಟಿಗಳಿಗೆ
ತುಟಿಗಳಿಂದ ಬೀಗವ ಹಾಕಿ
ನಿನ್ನ ಮಾತಿಗಿಂತ ಮೌನವೇ
ಚಂದವೆಂದುಬಿಟ್ಟನಲ್ಲ ಸುಳ್ಳ..!

ನೋಡಿ ಈ ಹುಡುಗನಿಗೆ
ನನ್ನ ಕಣ್ಣಂದ್ರು ಇಷ್ಟವಂತೆ
ಹೇಗಿದ್ದರೂ ನನ್ನಪ್ಪುವ ಹುಡುಗನಲ್ಲವ
ಕಣ್ಣಲ್ಲೆ ತಿಂದು ಮೊದಲ ಸುಳ್ಳಿನ
ಸೇಡು ತೀರಿಸಿಕೊಳ್ಳೋಣವೆಂದು
ನೋಡುತ್ತಾ ಕುಳಿತರೆ,,
ನನ್ನ ಸೀರೆಯ ಅಷ್ಟೂ ನೆರಿಗೆಯ
ಲೆಖ್ಖ ಸಿಕ್ಕಿದ್ದಾದರೂ ಹೇಗೆ ಇವನಿಗೆ?

ಕನಸಲ್ಲಿ ಬಂದು ಸುಮ್ಮನೇ
ನಿನ್ನ ಕಣ್ಣುಗಳಲ್ಲಿ ಕುಳಿತಿರ್ತೀನಿ
ಅಂದ ಅವನ ಬೆಣ್ಣೆಯ ಮಾತಿಗೆ
ಕರಗಿದ್ದು ತಪ್ಪಾಗಿತ್ತು ನೋಡಿ,
ಮುಂಜಾನೆ ಎದ್ದು ನೋಡಿದರೇ ನನ್ನ
ಬಂಗಾರದ ಮೈ ತುಂಡು ಬಟ್ಟೆಗೂ
ಬೇಡುತ್ತಿದ್ದ ಪರಿಯ ಕಂಡು
ನನಗೂ ಸುಳ್ಳೇ ಸಿಟ್ಟು ಬಂದಿತ್ತು.!

ನಿನಗೆ ನನ್ನಲ್ಲಿ ಇಷ್ಟೇ ಇಷ್ಟು
ಪ್ರೀತಿಯಿಲ್ಲ ಅಂತ ಸುಳ್ಳೇ
ಮುನಿಸಿಕೊಂಡಿದ್ದು ನನ್ನ ಅಪರಾಧವಾಯಿತಲ್ಲ!
ನನಗಿಲ್ಲಿ ಉಸಿರಾಡಲೂ ಆಗುತ್ತಿಲ್ಲ
ರಕ್ತಸಿಕ್ತ ತುಟಿಗಳಿಂದ ಒಂದೇ ಒಂದು ಸ್ವರವಿಲ್ಲ!
ಇದೇನ ಪ್ರೀತಿ ಅಂದಿದ್ದಕ್ಕೆ “ಮತ್ತೇನು”
ಅಂದು ತುಂಟ ನಗೆ ನಕ್ಕ
ಈ ಹುಡುಗನಲ್ಲಿ ನನಗೆ ಅಂತಹ ಕೋಪವೇನಿಲ್ಲ