ಒಲವಿನ ಭಾನು.

ಹೀಗೆ ನಿನ್ನ ಹೆಸರು ಬರೆಯಲು ಹೊರಟ ಈ ಪೆನ್ನಿನ ಮೂತಿಯ ತುದಿ ಬಂಗಾರವಾಯಿತು..ಹಾಗೆಯೇ ನಿನ್ನ ಹೆಸರು ಬರೆಸಿಕೊಂಡ ಈ ಹಾಳೆಯ ಮೇಲೆ ಬಂಗಾರದ ಚಿತ್ತಚಿತ್ತಾರಗಳು.ನಿನ್ನ ನೆನಪು ಮಾಡಿಕೊಂಡ ನನ್ನ ಮನಸ್ಸಿಗೆ ಈಗಾಗಲೇ ಬಂಗಾರದ ಕಾಲುಗಳು.ನಿನ್ನ ತುಂಬಿಕೊಂಡ ಈ ಕಂಗಳಲ್ಲಿ ಬಂಗಾರದ ಕನಸುಗಳು.ನಿನ್ನ ಜೊತೆ ಇಡಬೇಕಾದ ಹೆಜ್ಜೆಗಳ ಹಿಂದುಮುಂದೆಲ್ಲ ಬಂಗಾರದ ಹೂವುಗಳು.ನನ್ನೊಳಗೆ ನೀನಿಟ್ಟ ಎಲ್ಲ ರಂಗೋಲಿಗಳು ಕೂಡ ಬಂಗಾರದ ಚುಕ್ಕಿಗಳು ಅಲ್ಲವ? ನಿನ್ನ ತಬ್ಬಿಕೊಂಡ ಈ ಎದೆಯ ಅಷ್ಟೂ ರೋಮಗಳಲ್ಲಿ ಬಂಗಾರದ ತೆನೆಗಳು.ನಿನ್ನ ಜೊತೆ ನಾನಿರುವ ಒಂದು ಚಿಕ್ಕ ಗುಡಿಸಲು ಕೂಡ ಬಂಗಾರದ ಅರಮನೆ. ಕೈಬಳೆ ಬಂಗಾರವಲ್ಲ, ನಿನ್ನ ಕೈ ಬಂಗಾರ. ಕಾಲ್ಗೆಜ್ಜೆ ಬಂಗಾರವಲ್ಲ, ನೀನಿಟ್ಟ ಪ್ರತಿಹೆಜ್ಜೆಂii ಸಪ್ಪಳ ಕೂಡ ಬಂಗಾರವೇ. ನಿನ್ನ ಜೊತೆಗಿದ್ದ ಈ ಆರುನೂರ ಇಪ್ಪತ್ತು ದಿನಗಳು ಬಂಗಾರದಂತ ದಿನಗಳೇ ಆಗಿದ್ದವು. ಇನ್ನು ಜೊತೆಗಿರುವ ಸಾವಿರಾರು ದಿನಗಳೂ ಬಂಗರದಂತ ದಿನಗಳೇ ಆಗಿರುತ್ತವೆ.

ಭಾನು… ನಿನಗೆ ಒಂದು ಪತ್ರಬರಿಲಿಕ್ಕೆ ಕುಳಿತವನಿಗೆ ನೋಡು ಏನೂ ತೋಚುತ್ತಿಲ್ಲ. ನೀನು ನನ್ನೆಡೆಗಿಟ್ಟಿರುವ ಪ್ರೀತಿಗೆ ಈ ಪತ್ರ ತುಂಬ ಚಿಕ್ಕದು ಕಣೆ. ಮೊದಮೊದಲು ತುಂಬಾ ಗೋಳು ಹೊಯ್ದುಕೊಂಡೆ ಕ್ಷಮೆಯಿರಲಿ. ನಾನಿರುವ ಕಲರ್ ಗೆ ಅಷ್ಟೊಂದು ಸ್ಕೋಪ್ ತಗೋಬಾರದಿತ್ತು ಅದಕ್ಕೊಂದು ಕ್ಷಮೆಬೇಕು. ನಿಂಜೊತೆ ಸಿನಿಮಾಗೆ ಬರಲಿಲ್ಲ ಅದಕ್ಕೂ ಕ್ಷಮೆಬೇಕು. ನಿಂಜೊತೆ ಗುಟ್ಟಾಗಿ ಕುಳಿತು ಬೈಟು ಟೀ ಕುಡಿಯಲಿಲ್ಲ, ಇಲ್ಲಿಯವರೆಗೆ ಒಂದು ಪುಟಾಣಿ ಐಸ್ಕ್ರೀಮ್ ತಿನ್ಸಿಲ್ಲ, ನಿನ್ನ ಕೆಲವು ನೋವುಗಳಿಗೆ ನಗು ತುಂಬಲಿಲ್ಲ,ಅದಕ್ಕೂ ಕ್ಷಮೆಯಿರಲಿ. ಕೆಲವು ಸಲ ತುಂಬಾ ಕೆಟ್ಟದಾಗಿ ಬೈದಿದ್ದೀನಿ ಅದಕ್ಕೊಂದು ದೊಡ್ಡ ಕ್ಷಮೆ ಇರಲಿ. ಆದರೂ ಇಂದಿಗೂ ಬೆಟ್ಟದಷ್ಟು ಪ್ರೀತಿಸುತ್ತಿದ್ದೀಯ ಅಲ್ಲವ, ಅದಕ್ಕೆ ನಿನ್ನ ಬಂಗರದಂತವಳು ಅಂತ ಕರೆದಿದ್ದು. ನಿಜಕ್ಕೂ ನಿನಗೆ ನಾನು ಅರ್ಹನ ಅಂತ ಯೋಚಿಸ್ತಿರೋವಾಗಲೇ, ಚಿನ್ನ.. ಮಿಸ್ ಯೂ ಅನ್ನುವ ನಿನ್ನ ಬಂಗಾರದಂತಹ ಎಸ್ಸೆಮ್ಮೆಸ್ಸ್ ಬಂದುಬಿಡುತ್ತೆ. ಎಲ್ಲವನ್ನು ಮರೆತು ನಾನು ಮಿಸ್ ಯು ಟೂ ಅಂದುಬಿಡುತ್ತೇನೆ.

ಭಾನು… ನಿಜಕ್ಕೂ ಹುಡುಗಿಯರಿಗೆ ಒಂದಿಷ್ಟು ಆಸೆಗಳು ಅಂತ ಇರ್ತಾವಂತೆ ನಿಜಾನ? ಹುಡುಗ ಸುಂದರವಾಗಿರ್ಬೇಕು, ಬಹಳ ಎತ್ತರವಾಗಿರಬೇಕು, ಕಣ್ಣು ತುಂಬಾ ಚಂದವಿರಬೇಕು, ಪಸ್ಟ್ ಕ್ಲಾಸ್ ಅನ್ನುವ ಕೆಲ್ಸ, ಕೈ ತುಂಬ ಸಂಬಳ..ಹೀಗೆ ಇಷ್ಟೆ ಚಿಕ್ ಚಿಕ್ಕ ಆಸೆಗಳು ಕಣೆ..ಇದೆಲ್ಲ ನಿಜ ಅಲ್ವ? ಆದರೇ ನಾನಿದರಲ್ಲಿ ಏನು ಅಲ್ಲವಲ್ಲೆ? ಸದ್ಯಕ್ಕೆ ನಾನು ಖಾಲಿ ಜೇಬಿನ ಪಕೀರ..ಈಗ ಹೇಳಿಕೊಳ್ಳುವಂತ ಕೆಲ್ಸವಾಗಲಿ,ಸಂಬಳವಾಗಲಿ,ಯಾವುದೂ ಇಲ್ಲ ಗೊತ್ತ? ಗೊತ್ತಿಲ್ಲದೇ ಏನು..! ನನ್ನನ್ನಿಷ್ಟಪಡುವ ವೂದಲ ದಿನದಂದೇ ನಿನ್ಗೆಲ್ಲ ತಿಳಿದಿತ್ತು..ಆದರೂ ಹಚ್ಚಿಕೊಂಡೆ ಮೆಚ್ಚಿಕೊಂಡೆ..ಯಾಕೆ? ಪ್ರಶ್ನೆ ಕೇಳಿದ್ದೀನಿ ಉತ್ತರ ಹೇಳಬೇಕಾದವಳು ನೀನು..ನನಗೆ ಗೊತ್ತು ನೀನು ಹೇಳೋಲ್ಲ..ಮಿಸ್ ಯೂ ಅಂತ ಮೆಸ್ಸೇಜ್ ಕಳ್ಸೋದು ಬಿಟ್ರೆ ಮತ್ತೇನು ಗೊತ್ತಿಲ್ಲ ನಿಂಗೆ.

ಮತ್ತೇನು ಇಲ್ಲಪ್ಪ..ಯಾಕೋ ಪತ್ರಬರಿಬೇಕು ಅನ್ನಿಸ್ತು ಅದ್ಕೆ ಒಂದೆರೆಡು ಸಾಲು ಬರೆದೆ. ಓದಿ ನಿನಗಿಷ್ಟ ಆಗಿ ಮಿಸ್ ಯೂ ಅಂತ ಒಂದೆಸ್ಸೆಮ್ಮೆಸ್ ಬಂದ್ರು ನನಗಷ್ಟೇ ಸಾಕು. ಮತ್ತೊಂದು ವಿಷ್ಯ.. ಬೆಳಗ್ಗಿನ ಜಾವಕ್ಕೇ ಎದ್ದು ನೀನು ಕೆಲ್ಸಕ್ಕೆ ಹೋಗೊದು ನೆನೆಸಿಕೊಂಡ್ರೆ ತುಂಬಾ ಬೇಜಾರು ಕಣೆ..ಹಂಗೆ ಬೆಳಗ್ಗೆ ೯ ಗಂಟೆಯವರೆಗೂ ನಿನ್ನ ತಬ್ಬಿಕೊಂಡು ಮುಸುಕೆಳೆದು ಮಲಗಿಬಿಡಬೇಕು ಅನ್ನಿಸುತ್ತೆ. ಮುಂದೊಂದು ದಿನ ಇದೆಲ್ಲ ಇದ್ದಿದ್ದೆ ಅಲ್ಲವ? ಸರಿ ನಿಂಗೆ ಇನ್ನೊಂದು ವಿಷ್ಯ ಹೇಳಬೇಕು ಅಂತ ಇದ್ದೀನಿ. ಅದೇನಪ್ಪ ಅಂದ್ರೆ ತುಂಬಾ ತುಂಬಾ ಲವ್ ಯೂ… ಮತ್ತೆ ತುಂಬಾ ತುಂಬಾ ಮಿಸ್ ಯೂ..

ಯಾವತ್ತೂ ನಿನ್ನ
ಕರಿಯ