313309~Indian-village-girl-near-Haridwar-Posters

ಹದಿನೇಳನೆಯ ಕ್ರಾಸಿನ ಹುಡುಗಿಗೆ !

ತುಂಬಾ ದಿನಗಳಾದ ಮೇಲೆ ಪತ್ರ ಬರ್ದಿದ್ದಾನೆ ಕರಿಯಾ ಅಂತ ಒಂದು ಮುಕ್ಕಾಲು ಕೇಜಿ ಕೋಪ ಬಂದಿರಬೇಕು ಅಲ್ಲವಾ? ಇಲ್ಲಿ ನಾನು ನಿನ್ನ ಒಂದುವರೆ ಇಂಚು ಮೂಗು ನೀನು ಕೋಪಿಸಿಕೊಂಡಾಗ ಹೇಗೆ ಕಾಂಡೀತು ಎಂದು ನೆನೆಯುತ್ತ ಮತ್ತೆ ನಿನ್ನ ನೆನೆಯುತ್ತಾ ಮತ್ತೆ ನಿನ್ನೊಬ್ಬಳನ್ನೆ ನೆನೆಯುತ್ತಾ ಈ ಪತ್ರವನ್ನ ಬರೆಯುತ್ತಿದ್ದೇನೆ. ಎಂದಿನಂತೆ ನಾನು ನಿನ್ನ ನೆನಪಲ್ಲಿ ಫ಼ುಲ್ ದಿಲ್ಕುಷ್. ನೀನು ಕೊಟ್ಟ ಅಷ್ಟೂ ಮುತ್ತುಗಳನ್ನ ಈ ಎದೆಯೊಳಗೆ ಜೋಪಾನವಾಗಿ ಜೋಡಿಸಿಟ್ಟು ದಿನಕ್ಕೊಂದರಂತೆ ತೆಗೆದುಕೊಂಡು ಮತ್ತಷ್ಟು ಮುತ್ತುಗಳಿಗೆ ಬೇಡಿಕೆ ಸಲ್ಲಿಸುವವನಿದ್ದೀನಿ. ಮುತ್ತು ಮತ್ತು ನನ್ನ ಬಗೆಗಿರುವ ಪ್ರೀತಿಯ ವಿಷಯದಲ್ಲಿ ನೀನು ಅಕ್ಷಯ ಪಾತ್ರೆ ಮತ್ತು ನಾನು ಅಕ್ಷಯಪಾತ್ರೆಯನ್ನೂ ಖಾಲಿಮಾಡಿ ಬಿಡುತ್ತೇನೆಂದು ಹೊರಟ ಒರಟ.

ಮತ್ತೆ ಹೇಗಿದ್ದಾರೆ ನಿನ್ನ ದೂರ್ವಾಸಮುನಿಯಂತ ಮೂರು ಜನ ಅಣ್ಣಂದಿರು? ಸುಂದರವಾದ ಹುಡುಗಿಯ ಹಿಂದೆ ಈ ದೇವರು ಅನ್ನುವ ಪಾಪಿಷ್ಟ, ಬಲಿಷ್ಟ ಅಣ್ಣಂದಿರನ್ನ ಹುಟ್ಟಿಸಿರುತ್ತಾನೆ ಅನ್ನುವ ಮಾತು ಕೇಳಿದ್ದೆ, ಆದರೆ ಇದು ನಿನ್ನ ವಿಷಯದಲ್ಲಿ ನಿಜವಾಯ್ತು ಅಲ್ವಾ? ದೂರ್ವಾಸಮುನಿಯಂತ ನಿನ್ನಣ್ಣಂದಿರಿಂದ ಅದೆಷ್ಟು ಕಿಸ್ಸುಗಳು ಮಿಸ್ಸಾದವು ನೆನಪಿದೆಯಾ? ಅದೆಷ್ಟು ಅಪ್ಪುಗೆಗಳು ತಬ್ಬಲಿಗಳಾದವು ನೆನಪಿದೆಯಾ? ಅದೆಷ್ಟು ಮಾರ್ನಿಂಗ್ ಶೋ ಸಿನಿಮಾಗಳು ಲಾಸು ಮಾಡಿಕೊಂಡವು ನೆನಪಿದೆಯಾ? ತುಂಬಾ ಹೂವುಗಳು ನಿನ್ನ ಮುಡಿಗೇರಲಿಲ್ಲ.. ತುಂಬಾ ತುಂಬಾ ಬೇಜಾರಾದಾಗಾ ನನ್ನ ಕಣ್ಣ ಹನಿಗಳು ನಿನ್ನ ಮಡಿಲು ಸೇರಲಿಲ್ಲ. ಪಾರ್ಕಿನ ಮೂಲೆಯ ಬೆಂಚುಗಳು ಮತ್ತು ನಿನ್ನ ಮನೆಯ ಹದಿನೇಳನೆಯ ಕ್ರಾಸಿನ ಮೂಲೆಯ ಕತ್ತಲು ನಾಚಿಕೊಳ್ಳಲಿಲ್ಲ.. ನಿನ್ನ ಬಂಗಾರದಂತ ಕಾಲ ಬೆರಳುಗಳಿಗೆ ನನ್ನ ಒರಟು ಒರಟು ಕಾಲ ಬೆರಳು ತಾಗಿಸಿಕೊಂಡು ನಡೆಯುವಾಗ ನನಗಾಗುತ್ತಿದ್ದ ಕುಷಿ ಮತ್ತೆ ನನಗೆ ಸಿಗಲಿಲ್ಲ..ನಿನ್ನ ಕೈ ಹಿಡಿದು ನಡೆಯುತ್ತಿದ್ದರೆ ಊರಲ್ಲಿರೊ ಅಷ್ಟೂ ಹುಡುಗರ ಹೊಟ್ಟೆ ಉರಿಯುವುದನ್ನ ಮತ್ತೆ ನೋಡಲಾಗಲೇ ಇಲ್ಲವಲ್ಲಾ? ಇಷ್ಟೆಲ್ಲ ಲಾಸುಗಳನ್ನ ಅದ್ಯಾವ ದೇವರು ತಂದುಕೊಡುತ್ತಾನೆ? ತುಂಬಿಕೊಡುತ್ತಾನೆ?

ನಿಂಗೆ ಈ ಪತ್ರ ಓದಿ ನಗು ಬರ್ತಿದ್ಯಾ? ಪತ್ರ ತಮಾಷೆ ತರ ಕಾಣ್ಸುತ್ತಾ ? ಸರಿ ಹಗಾದ್ರೆ ಕೇಳಿಲ್ಲಿ.. ನಂಗೆ ನಿನ್ನ ಬಿಟ್ಟು ಬದುಕಿರೋ ಶಕ್ತಿ ಇದ್ಯಾ ಅಂತ ತುಂಬಾ ಸಲ ಕನ್ನಡಿ ಮುಂದೆ ನಿಂತು ಕೇಳಿಕೊಂಡಿದ್ದೀನಿ. ನನ್ನ ಕಣ್ಣುಗಳೇ ಧಾರಾಕಾರವಾಗಿ ಅಳುವ ಮೂಲಕ ನನ್ನ ಪ್ರಶ್ನೆಗೆ ಉತ್ತರಿಸಿವೆ. ನನ್ನಿಂದ ನಿನ್ನನ್ನ ದೂರ ಮಾಡಿದ ನಂತರದ ಒಂದು ಕ್ಷಣದಿಂದಲೇ ನಿನ್ನ ಮೇಲಿನ ನನ್ನ ಪ್ರೀತಿ ಇಮ್ಮಡಿಯಾಗಿದೆ..ಅದಕ್ಕಾಗಿ ನಿನ್ನ ಮನೆಯವರಿಗೆ ಗೌರವಪೂರ್ವಕವಾಗಿ ಒಂದು ದೊಡ್ಡ ಥ್ಯಾಂಕ್ಸ್. ಮತ್ತಷ್ಟು ದೂರ ಮಾಡದೇ ಇದ್ದರೆ ಆ ಇಲ್ಲದ ದೇವರಿಗೂ ಒಂದು ದೊಡ್ಡ ಥ್ಯಾಂಕ್ಸ್ ಮತ್ತು ಇಲ್ಲಿಂದಾನೆ ಒಂದು ಫ಼್ಲಯಿಂಗ್ ಕಿಸ್ಸು. ಮತ್ತೆ ನೀನು ನಂಬುವ ನಾನು ನಂಬದೇ ಇರುವ ದೇವರಲ್ಲಿ ನಾನು ಕೇಳಿಕೊಳ್ಳುವುದಿಷ್ಟೆ. ಈ ಪೆದ್ದು ಹುಡುಗಿಗೆ ಒಂದಿಷ್ಟು ಗ್ರಾಮುಗಳ ತೂಕದ ದೈರ್ಯವನ್ನಾದರೂ ಕೊಡು ಅಂತ. ಆ ಮೂಲಕವಾದರೂ ತನ್ನ ಅಣ್ಣಂದಿರ ಮುಂದೆ ನಿಂತು, ನಂಗೆ ಆ ಕರಿಯನನ್ನ ಕೊಡ್ಸಿ ಅನ್ನುವ ಮಾತು ಆಡ್ತಿಯೇನೊ ಅಂತ. ಇಲ್ಲವಾದರೇ ಹೇಗಿದ್ದೀಯೋ ಹಾಗೆ ಮನೆಯ ಬಾಗಿಲಿಗೆ ಬಂದುಬಿಡು. ಮನೆಯ ಮತ್ತು ಈ ಎದೆಯ ಹೊಸ್ತಿಲು ಯಾವತ್ತು ನಿನಗೆ ಅಂತಾನೆ ಕಾಯುತ್ತಿರುತ್ತೆ.

ನಿನಗೆ ಗೊತ್ತ? ಪ್ರತಿದಿನ ನಾನು ದೀಪ ಹಚ್ಚುವಾಗ ಆರಿಸುವಾಗ ಮತ್ತು ಮಲಗುವಾಗ ನಿನ್ನ ನೆನಪು ಮಾಡಿಕೊಳ್ಳುತ್ತೇನೆ.. ನನಗೆ ನೀನೆಂದರೆ ಬೆಳಕು, ನೀನೆಂದರೆ ಕತ್ತಲು ನೀನೆಂದರೆ ಹಾಸಿಗೆ ಮತ್ತೆ ಕೊನೆಯದಾಗಿ ನೀನೆಂದರೆ ನನ್ನ ಎಲ್ಲ ನೆನಪುಗಳ ಮೆರವಣಿಗೆ ಮತ್ತೆ ನೀನೆಂದರೆ ನನ್ನ ಮುಂದಿರುವ ಪೂರ್ತಿ ಬದುಕು !

ನಿನ್ನವನೆ

ನವಿಲೂರ್ ಹುಡ್ಗ