( ವಿಶೇಷ ಸೂಚನೆ. ಈ ಸಾಲುಗಳನ್ನ ಸುಮ್ಮನೇ ಗೀಚಿದ್ದು, ಕವಿತೆ ಅಂದುಕೊಂಡು ಓದಿದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು)

ನೀನು ನನಗೆ ಮುಡಿಯಲಾರದ ಹೂವು
ಮರೆಯಲಾರದ ನೋವು
ಎದುರು ನೋಡುತ್ತಿರುವ ಸಾವು
ನೀನು ಗಾಳಿಗೆ ತೂರಿದ ನೀತಿ
ಪ್ರಾಮಾಣಿಕವಲ್ಲದ ಪ್ರೀತಿ.

ನೀನು ನನಗೆ ನೋವಿನ ಅಕ್ಷಯಪಾತ್ರೆ
ಹೃದಯದ ಸಣ್ಣ ನೋವಿಗೂ ಸ್ಪಂದಿಸದ
ನಿರಾಸೆಯ ಮಾತ್ರೆ.
ಯಾರೂ ನೋಡಲಾಗದ ಹಾಳೂರಿನ ಜಾತ್ರೆ
ಎಂದೂ ಮುಗಿಯದ ಅಂತಿಮ ಯಾತ್ರೆ.

ನೀನು ನನಗೆ ಮರೆತುಬಿಡುವಂತಹ ಚಿತ್ರ
ನಾನು ಒಂದಕ್ಷರವೂ ಓದಲಾಗದ ಪತ್ರ
ಸರಿಯಾದ ಪ್ರಶ್ನೆಗೆ ತಪ್ಪು ತಪ್ಪು ಉತ್ತರ
ಕೈಗೂಡದ ಕನಸುಗಳಿತೆ ತುಂಬ ಹತ್ತಿರ.

ನೀನು ನನಗೆ ಬೆಳಕಿನ ಕತ್ತಲು
ಭಾವನೆಗಳ ಪೂರ್ತಿ ಬೆತ್ತಲು
ನೀನು ನನಗೆ ಅಮವಾಸ್ಯೆಯ ಚಂದಿರ
ದೇವರಿಲ್ಲದ ಮಂದಿರ,
ಭರವಸೆಗಳೆ ಇಲ್ಲದ ಖಾಲಿ ಖಾಲಿ ಬಟ್ಟಲು
ಬದುಕಿನ ರೇಸಿನಲ್ಲಿ ಸಿಕ್ಕ ಸೋಲಿನ ಮೆಡಲ್ಲು.

ನೀನು ಆಸೆಗಳ ಮುಳುಗಿಸಿದ ಕಡಲು
ಆಸರೆಯಾಗದೇ ಹೋದ ಒಡಲು
ನಿದ್ದೆ ಬಾರದ ಮಡಿಲು
ನೀನು ನನಗೆ ಒಂದು ಸುಂದರ ಸಜ
ಆದರೂ ನಾನು ಪ್ರೀತಿಸಿದ್ದು ಎಷ್ಟೊಂದು ನಿಜ.