ನಿಮ್ಮ ಭಾವನೆಗೆ ನನ್ನ ಕೆಲವೇ ಕೆಲವು ಪದಗಳು
ಇಲ್ಲಿರುವ ಯಾವುದೇ ಕವಿತೆಗಳಿಗೆ ಮತ್ತು ಹಾಳುಮೂಳು ಬರಹಗಳಿಗೆ ಒಂದು ದೃಷ್ಟಿಕೋನ ಒಂದು ಗುರಿ,ಧ್ಯೇಯ ಯಾವುದು ಇಲ್ಲ.ಇಲ್ಲಿರುವ ಪದಗಳಿಗೆ ಕವಿತೆ ಅನ್ನುವ ಚಂದದ ಹೆಸರಿನಿಂದ ಕರೆಯಬೇಕ? ಅದೂ ತೋಚುತ್ತಿಲ್ಲ.ಕೊನೆಗೆ ಈ ಪದಗಳ ಮೂಲಕ ನಾನು ಏನು ಹೇಳಲಿಕ್ಕೆ ಹೊರಟಿದ್ದೇನೆ ಅಂತ ಕೆಲವೊಂದು ಸಲ ನನಗೂ ಅರ್ಥವಾಗುವುದಿಲ್ಲ. ಇಲ್ಲಿರುವುದೆಲ್ಲ ಕೇವಲ ಹುಚ್ಚು ಮನಸ್ಸಿನ ಭೋರ್ಗರೆತಗಳು ಮಾತ್ರ. ಇವನ್ನ ಕವಿತೆ ಮತ್ತು ಅದ್ಭುತ ಬರಹ ಅಂತ ಓದುವ ನಿಮಗೆ ಮತ್ತು ನಿಮ್ಮ ಸಹನೆಗೆ ಮತ್ತು ಅತ್ಯಮೂಲ್ಯ ಸಮಯಕ್ಕೆ ನಾನು ಅಭಾರಿ…….ಮತ್ತೆ ಇಲ್ಲಿ ಕೆಲವೊಂದು ಸಲ ಕೆಲವು ಘಟನೆಗಳನ್ನ ನೆರವಾಗಿ ಹೇಳಬೇಕಾದ ಸಮಯದಲ್ಲಿ ಅನಿವಾರ್ಯವಾಗಿ ಅಸಂಬದ್ದ ಪದಗಳನ್ನ ಉಪಯೋಗಿಸಲೇ ಬೇಕಾಗುತ್ತದೆ ..ಮಡಿವಂತ ಮಹಾಶಯರು ನನ್ನ ಈ ಒಂದು ತಪ್ಪನ್ನ ಕ್ಷಮಿಸಿಬಿದಬೇಕು…….ಇಂತಿ ನಿಮ್ಮ ಪ್ರೀತಿಯ ನವಿಲುಗರಿ ಹುಡುಗ

Author Archive

ನಿನ್ನ ನೆನೆಯುತ್ತಾ….!

September 8, 2007

ಕಾದಿದ್ದೆ ಬಂತು
ಭೂಮಿಯಾಕಾಶಗಳ ಮದ್ಯೆ
ಮನಸ್ಸು ಶಬರಿಯಾಗಿಸಿಕೊಂಡು
ಇಲ್ಲದ ರಾಮನಿಗಾಗಿ……
ನಟ್ಟ ನಡುರಾತ್ರಿ ಎದ್ದು
ಹೋದ ಬುದ್ಧನಂತೆ ಹೋದೆಯಲ್ಲ
ನಾನು ಅನುಭವಿಸಿದ ನೋವು
ನಿರಾಶೆ ತಬ್ಬಲಿತನಗಳ ಲೆಕ್ಕ
ಕೇಳುವೆ ಕೊಡು ನೋಡುವಾ…
ಶುಭ್ರವಾಗಿತ್ತಲ್ಲವ ಮನದ ಕೊಳ
ಒಂದಷ್ಟು ದಿನದಲ್ಲಿ ಅದೆಷ್ಟು ನೀರು
ರಾಢಿಯಾಗಿದ್ದಕ್ಕೆ ಬೇಸರವಿಲ್ಲ
ಮತ್ತದೇ ನೀರು ತುಂಬಲು
ನಾನೆಷ್ಟು ನೀರು ಸುರಿಸಬೇಕು?
ಇಲ್ಲ ಇಂದಿನಿಂದ
ನನ್ನೊಳಗೆ ಯಾವ ಬೀಜವೂ
ಮೊಳಕೆಯೊಡೆಯುವುದಿಲ್ಲ..
ಆದರೂ ಬೆಳೆದು ಹೆಮ್ಮರವಾಗುವಂತಹ
ನನ್ನ ಅಗಾದ ಆಸೆಗಳಿಗೆ ಬಂಜೆತನ ಬಂದಿಲ್ಲ..
ಬತ್ತಿದೊಡಲು ತುಂಬುವುದಿಲ್ಲ
ಎದೆಯೊಳಗೆ ಹಾಲಿನ ನದಿ ಹರಿಯುವುದಿಲ್ಲ
ನಿನ್ನಪ್ಪುಗೆಯಾ ಮಾಯೆಯಲ್ಲಿ ದೇಹ ಮುರಿದು
ದಣಿದು ಬೆವರ ಹೊಳೆಹರಿಯುವುದಿಲ್ಲ…ಪಾಪಿ ನೀನು

ಕಣ್ಣುಗಳು……

July 10, 2007

ಮೇಘಗಳೇ ನೀವೆಷ್ಟು ಚಿಕ್ಕವರು
ನನ್ನ ಕಣ್ಣುಗಳ ಮುಂದೆ..
ನಾನು ಸುರಿಸಿದಷ್ಟು ಕಣ್ಣೀರು
ನೀವು ಸುರಿಸಲಿಲ್ಲ ನೀರು…!
ಎಷ್ಟು ವರ್ಶವಾಯಿತು ಗೆಳೆಯ
ಶಬರಿಯಂತೆ ಕಾದಿದ್ದು ನಾನಲ್ಲ
ನನ್ನ ಕಣ್ಣುಗಳು….ಬಯಕೆಯಿಂದ
ನೀ ನನ್ನ ಮೈ ಮುಟ್ಟಲೇ ಬೇಡ
ಬಾ ಮುತ್ತಿಡು ನನ್ನ ಕಂಗಳಿಗೆ…!
ನನಗೆ ಗೊತ್ತು ಮೋಸವಾಗಿದ್ದು
ನನಗೆ..ದುಃಖಿಸಿದ್ದು ನಾನಾದರೂ
ಬೋರ್ಗರೆದು ಅತ್ತಿದ್ದು ಮಾತ್ರ ಕಣ್ಣುಗಳು
ಒಂದು ಸಲ ನನ್ನ ಕಂಗಳ ಮೇಲೆ ನಿನ್ನ ಬೆರೆಳು..!
ಆಮೇಲೆ ಸತ್ತರು ಚಿಂತೆಯಿಲ್ಲ…ಕಣ್ಣುಗಳು ಮಾತ್ರ ನಿನ್ನವು…!
ಹೃದಯ ಸುಳ್ಳು ಹೇಳುವುದಿಲ್ಲವಂತೆ
ಹಾಗಾದರೆ ನನ್ನ ಕಣ್ಣುಗಳು ಯಾವತ್ತು?
ನೀನಾಡುವ ಒಂದು ಮಾತಿಗೆ ಜಾತಕ
ಪಕ್ಷಿಯ ಹಾಗೆ ಕಾತರಿಸಿದ್ದು ಕಿವಿಗಳಲ್ಲ ಕಣ್ಣುಗಳು….
ಅಲ್ಲಿರುವ ಬೆಳಕು ನೋಡಿಯು ನೀ ಅರಿಯಲಿಲ್ಲ…!
ನಾನಿಷ್ಟವಗಲಿಲ್ಲವ ಹೇಳು ಕಾರಣ [...]

ಚುಟುಕುಗಳು……….

July 8, 2007

ಮೀನುಗಾರನ ಬದುಕುವ ಛಲ
ಮತ್ತೆ ಮೀನಿನ ಬದುಕುವ ಹಠ
ಎರೆಡು ಪ್ರಾಮಾಣಿಕತೆಯಿಂದ
ಕೂಡಿದ್ದರ ಪ್ರತಿಬಿಂಬವೇನೋ
ಅನ್ನುವಂತೆ ಒಂದೋಂದು ಸಲ
ಮೀನಿಗೆ ಸೋಲು…
ಮಗದೊಂದು ಸಲ ಮೀನುಗಾರನ ಸಾವು…!!!!
_______________________________________
ಸಾಗಿಬಂದ ದಾರಿ ಏನೇನು ಅಲ್ಲ
ಸಾಗಬೇಕಾದ ದಾರಿ ತುಂಬಾ ಇದೆ
ಅನ್ನುವಾ ಭಾಷಣಕಾರರೇ..ನೋಡ ಬನ್ನಿ
ಅವಳಿಲ್ಲದೇ ಸಾಗಿ ಬಂದ ನನ್ನ ಪ್ರತೀ
ಹೆಜ್ಜೆಗಳು ಅನುಭವಿಸಿದ ಒಂಟಿತನವನ್ನ
ಜಗತ್ತಿಗೇ ಹಂಚಿ ಉಳಿಯುವಷ್ಟಿದೆ…
___________________________________________
ಪ್ರೀತಿ ಪ್ರೇಮ ಪ್ರಣಯ
ಸೊಗಸು ಕನಸು ಮನಸು
ಹೃದಯ ಅಂದ ಚೆಂದಗಳ
ಅರಮನೆಯಲ್ಲಿರುವ ನಿಮಗೆ
ವಾಸ್ತವದ ಅರಿವಾಗುವುದು
ಬದುಕೆಂಬ ಮಾಯಾವಿ
ವಾಸ್ತವದ ಛಡಿಯೇಟು ಕೊಟ್ಟಾಗಲೆ…………….
___________________________________________
ಬರೀ ಕಷ್ಟಗಳಿಗೆ ಹೆದರಿ
ನಿಂತಿರುವ ನೀನು…]
ಕೆಟ್ಟಾನುಕೆಟ್ಟ ಕೆಸರಿನಲ್ಲಿಯೂ
ಅರಳುತ್ತಿರುವ ಕಮಲದ ಹೂವಿನ
ಜೀವನೋತ್ಸಾಹವನ್ನು ಕಂಡು
ನಾಚಿ ತಲೆ ತಗ್ಗಿಸಲೇ ಬೇಕು….

ನಿನ್ನ ಹೋಲಿಸಲಾರೆ..!!

June 10, 2007

ನನ್ನ ಕತ್ತಲೆಗೆ ಒಂದಿಷ್ಟು
ಬೆಳಕ ನೀಡದ ನಿನ್ನ
ಕಣ್ಣುಗಳನ್ನ ನಾನು
ನಕ್ಷತ್ರಗಳಿಗೆ ಹೋಲಿಸುವ
ಪಾಪವ ಮಾಡಲಾರೆ ಕ್ಷಮಿಸು..!!!.
ಜಗದೊಳಿತಿಗೆ ತಂಪನೆರೆಯುವ
ಚಂದ್ರನ ಅಗಾಧ ಪ್ರೇಮಕ್ಕೆ
ಮತ್ತವನ ರೂಪಕ್ಕೆ ಹೃದಯವಿಲ್ಲದವಳ ನಿನ್ನ ಹೋಲಿಸಿ
ಮತ್ತೆ ಮತ್ತೆ ತಪ್ಪು ಮಾಡಲಾರೆ ಕ್ಷಮಿಸು..!!!
ಸುರಿಯುವ ಬೆಳದಿಂಗಳಿಗೆ,
ಮಲ್ಲಿಗೆ ಕಂಪಸೂಸುವ ತಂಗಾಳಿಗೆ,
ಮುದ್ದು ಮುದ್ದು ಮಗುವಿನ ಮನಸ್ಸುಗಳಿಗೆ
ಕದ್ದು ಕದ್ದು ಕಾಣುವ ಅಗೋಚರ ಕನಸುಗಳಿಗೆ,
ಕನಸುಗಳಿಲ್ಲದ ನಿನ್ನ ಹೋಲಿಸಲಾರೆ ಕ್ಷಮಿಸಿಬಿಡು…!!!
ಇದ್ದು ಇಲ್ಲದಂತಿದ್ದು..ಇರುವ..ದೇವರಿಗೆ,
ಸುಂದರ ಬದುಕಿಗೆ,ಕಾಣದ ನಾಳೆಗಳಿಗೆ,
ಕಳೆದ ಸುಂದರ ನಿನ್ನೆಗಳಿಗೆ,
ಕಳೆಯುತ್ತಿರುವ ಈ ಕ್ಷಣಗಳಿಗೆ.
ಕೇವಲ ನೋವುಣಿಸುವ ನಿನಗೆ ಹೋಲಿಸಲಾರೆ ಕ್ಷಮಿಸಿ ಬಿಡು…!!

ನೆನಪು….!!!

March 12, 2007

ಬಾನಂಚಿನ ಮೋಡದಲ್ಲಿ ಮರೆಯಾದ ಕಣ್ಣೋಟ
ತುಟಿಯೆಲೆಯಂಚಿನ ಮುತ್ತಿನಲ್ಲಿ ಕಳೆದು ಹೋದ ಮುಗುಳ್ನಗೆ
ಮೋಹಕ ಕೋಲ್ಮಿಂಚಿನೊಂದಿಗೆ ಬರುವುದೇಕೀ ಸಿಡಿಲು?
ಮಳೆಯಾಗಿ ಸುರಿದರೂ ಮನದಲಿಲ್ಲ ನಿನ್ನ ನೆನಪು..!![shhhhhhhhh]
ಎದೆಯಾಳದಲ್ಲೆಲ್ಲೊ ಮರೆತ ಕವಿತೆ
ಹಾಡೆಂದರೆ ಹಾಡುವುದು ಹೇಗೆ ನೀನಿಲ್ಲದೆ?
ಎಲ್ಲವೂ ನೆನಪಿದೆ ನಿನ್ನ ಕೈತುತ್ತಿನ ಹಾಗೆ
ನಿನ್ನ ಬೆಚ್ಚನೆ ಮಡಿಲ ಹಾಗೆ
ಹಿಗ್ಗಿ ಹಿಗ್ಗಿ ಹುಗ್ಗಿಯಾಗಿದ್ದು ಜೀವ
ನಿನ್ನಗಲಿಕೆಯಿಂದ ಬಡವಾಗಿದ್ದು ಹೃದಯ…!! [shhhhhhhh]
ಮರೆವೆನೆಂದು ಕುಳಿತರೆ ನಿನ್ನ
ನೆನಪುಗಳ ಮೆರವಣಿಗೆಗಳ ಸಾಲು ಸಾಲು
ಮರಳಿ ಬರಲಾರದ ಹೃದಯವ ನೆನೆದು
ಮನದ ಮುಗಿಲೊಳಗೀಗ ಮಳೆಯಿಲ್ಲ..!!

ನಿನ್ನ ನೆನಪಾಯಿತು..!!!

February 13, 2007

ನಿನ್ನ ಕಳೆದುಕೊಂಡ ನಾನು
ಇನ್ನೂ ಬದುಕಿರುವೆನೆಂದರೆ
ಒಮ್ಮೆಯಾದರು ನೀನು ಬಂದು
ನನ್ನ ಕನಸಲ್ಲಾದರೂ ಲಾಲಿ
ಹಾಡುವೆಯೆಂಬಾ ಮಹದಾಸೆಯಿಂದ..!
ಬಯಗೊಳಿಸುವ ಕತ್ತಲಿದೆ
ಆದರೂ ಅರೆಕ್ಷಣ ಕಣ್ಣುಮುಚ್ಚುತ್ತಿಲ್ಲ!
ಕಣ್ಣಾಲೆಗಳ ತುಂಬ ನಿನ್ನ ಹಾಡುಗಳೇ
ನಿನ್ನ ಹಾಡಿನ ಲಾಲಿಯ ಜೋಕಾಲಿಯಲ್ಲಿ
ಪಾಪ ಕತ್ತಲೂ ಕೂಡ ನನ್ನ ಮುಂದೆ ಕಣ್ಮುಚ್ಚಿ ಮಲಗಿದೆ..!!
ನೋವು,ನಿರಾಸೆ,ಕಣ್ಣೀರು
ಒಂಟಿತನ,ಬೇಸರ, ತಬ್ಬಲಿತನಗಳು
ನೀ ಕೊಟ್ಟ ಬಳುವಳಿಗಳೆಂದು ತಿಳಿದ ಮೇಲೆ
ನನಗ್ಯಾವುದರ ಅರಿವಿಲ್ಲ..!!
ಹೃದಯವೇ ಇಲ್ಲದವನಲ್ಲಿ ಇನ್ನು ಅನುಭವಗಳೆಲ್ಲಿ..!!!
ನಿನ್ನ ಜಿಂಕೆಮರಿಯಂದಿದ್ದೆ
ನನ್ನ ಅಪರಾಧವಾಯಿತೆ ಗೆಳತಿ..!
ಕ್ಷಣದೊಳಗೆ ನನ್ನನ್ನಗಲಿ
ನೀ ಅಗೋಚರ ದಿಕ್ಕಿಗೆ ಸಾಗಿ ಬಿಟ್ಟೆ
ನೋಡಿಲ್ಲಿ ನನ್ನೆದೆಯಾಳದ
ಮೈದಾನ ನಿನ್ನಾಟವಿಲ್ಲದ ಬರಡು ಬರಡು..!!
ನನಗೆ ನೀನು ನೆರಳ ಕೊಡದಿದ್ದರು
ಚಿಂತೆಯಿಲ್ಲವೆ ಗೆಳತಿ..ಬಿರುಬಿಸಿಲು ಬೇಡ
ನಿನ್ನ ಚಂದ್ರನಿಗೆ ಹೋಲಿಸಿದ್ದು ನಾನು
ನನ್ನ ನಂಬಿಕೆ ಸುಳ್ಳಾಗದಿರಲಿ…!
ನಾನು [...]

ಗೆಳತಿಯ-ಗುಟ್ಟು

January 25, 2007

ಹತ್ತಾರು ಕವಿತೆಯಲ್ಲಿರದ ಶಕ್ತಿ
ನಿನ್ನ ಕಣ್ಣಾಲೆಗಳಲ್ಲಿದೆಯಲ್ಲ ಗೆಳತಿ
ಅದರ ಗುಟ್ಟೇನು..!!
ನೂರಾರು ನೋವುಗಳು
ನಿನ್ನ ನಗುವ ಮಾಯೆಯಲ್ಲಿ
ಮಾಯವಾಗುವುದರ ಗುಟ್ಟೇನು ಗೆಳತಿ..!!
ಯಾರೊ ಬರೆದ ಪ್ರೀತಿಯ
ಕವಿತೆಯೊಳಗೂ ನಿನ್ನ ಛಾಯೆ !
ಯಾರೋ ಹಾಡಿದ ಹಾಡಿನೊಳಗೂ
ನಿನ್ನದೇ ಪ್ರೀತಿಯ ಮಾಯೆ ಮಾಯೆ
ನಿನ್ನ ಕುರಿತು ಬರೆದ ಪ್ರತಿ ಪದಗಳೂ
ಬಂಗಾರವಾಗುವುದರ ಗುಟ್ಟೇನು ಗೆಳತಿ..!!
ನೀನಾಡುವ ಪ್ರತಿ ಮಾತುಗಳು
ನೊಂದ ಹೃದಯಕ್ಕೆ ಮಲ್ಲಿಗೆಯಾಗುವುದರ ಗುಟ್ಟು ?
ನೀ ನೋಡುವ ಪ್ರತಿ ಹೂವುಗಳೂ
ಗುಲಾಭಿಯಾಗುವುದರ ಗುಟ್ಟೇನು ಗೆಳತಿ..!!
ಮನ ಮರುಗಿದಾಗಲೆಲ್ಲ
ನನ್ನ ಮನ ನಿನ್ನ ಹೆಗಲ ಬೇಡುವುದರ ಗುಟ್ಟೆನು?
ಕೂಡಿ ಬೆಳೆಯಲಿಲ್ಲ,ಕೂಡಿ ಬೆರೆಯಲಿಲ್ಲ
ಆದರೂ ಅರೆಕ್ಷಣ ನಿನ್ನಗಲಿರಲಾರದ
ಮಧುರ ನೋವಿನ ಗುಟ್ಟಾದರೂ ಏನು ಗೆಳತಿ..!!
ನಟ್ಟ ನಡುರಾತ್ರಿ ಬೆಚ್ಚಿ ಬೀಳಿಸುವ
ಕನಸುಗಳಿಗೆ [...]

ಆಮ್ಮ ಸುಳ್ಳು ಹೇಳುತ್ತಾಳೇ….!!!

December 26, 2006

ಕಣ್ಣೊಳಗೆ ರಕ್ತ ಬರಿಸುವ ನೋವುಗಳಿದ್ದರು
ಒಳಗೊಳಗೆ ಅಳುತ್ತಾ ಅಳುತ್ತಾ
ಇಷ್ಟಗಲ ನಗುನಗುತ್ತಿದ್ದ, ಮಿನುಗುತ್ತಿದ್ದ
ಭೂಮಿ ತೂಕದ ಅಮ್ಮಾ..ನೀನು ಸುಳ್ಳಿಯಲ್ಲವೆ?
ಗುಮ್ಮಾ ಬಂದಾ ಎನ್ನುತ್ತಾ
ತುತ್ತು ತುತ್ತು ಅಮೃತವನ್ನು
ಮೋಸದಿಂದ ಬಾಯಿಗಿಟ್ಟು
ತಿನಿಸಿ ತನ್ನ ನೋವ ಮರೆಯುತ್ತಿದ್ದ ನೀನು ಸುಳ್ಳಿಯಲ್ಲವೆ?
ತುತ್ತು ಅನ್ನಕ್ಕು ಗತಿಯಿಲ್ಲದಿರುವಾಗ,
ಮಾಡಿದ ಒಂದಗುಲ ಗಂಜಿಯನ್ನ
ಮಕ್ಕಳಿಗೆ ತಿನ್ನಿಸಿ ನೀನು ಮಾತ್ರ
“ಯಾಕೊ ಹೊಟ್ಟೆ ನೋವು” ಅಂದು
ನೋವಿನಿಂದ ಹಸಿದು ನೆಲವ ತಬ್ಬಿ
ಮಲಗುತ್ತಿದ್ದ ಅಮ್ಮ ನೀನು ಸುಳ್ಳಿಯಲ್ಲವೇನೆ?
ಕುಡುಕ ಗಂಡನ ಹಾದರವನ್ನ
ನಿನ್ನ ಸೆರಗಿನಲ್ಲಿ ಕಟ್ಟಿಕೊಂಡು
ನೋಯುತ್ತಿದ್ದ ನೀನು ಸುಳ್ಳಿಯಲ್ಲವೆ..!
ಮಗನ ಹೊಡೆಯಲು ಬಂದ ಕುಡುಕ ಗಂಡನಿಗೆ
ಸೆರಗಿನಲ್ಲೆ ಮಗನ ಬಚ್ಚಿಟ್ಟುಕೊಂಡು
ಮಗನಿಲ್ಲವೆಂದು ಮಮತೆ ತೋರಿದ ನೀನು ಸುಳ್ಳಿಯಲ್ಲವೆ..?
ಕೊರಳಿನಲ್ಲಿ ಬೆಳ್ಳಿಯ ತಾಳಿ
ಅದಕ್ಕೆ [...]

ನಾನಿದ್ದೆ ನಾನಾಗಿ[ವಿನಾಯಕ ಜೋಶಿ]

December 26, 2006

ನಾನಿದ್ದೆ ನಾನಾಗಿ
ಆದರೆ ಬದಲಾದೆ ಏನಾಗಿ ?
ಜುಪ್ ಎಂದು ಎಗರುತ್ತಿದ್ದವನು
ಚಪ್ಪೇ ಕಲ್ಲಷ್ಟು ಎಗರಾದಂತಾಗಿಹೆನು
ಹೂಮೇಲಿದ್ದ ಮಿಡತೆಯನ್ನು ಹಿಡಿಯುತ್ತಿದ್ದವನು
ಹೂವಿನ ಪಾಲಾಗುವ ಮಿಡತೆಯನ್ನು ಅರಸಿದೆನು…
ನಾನಿದ್ದೆ ನಾನಾಗಿ
ಆದರೆ ಬದಲಾದೆ ಏನಾಗಿ ?
ಅಪ್ಪನ ಎತ್ತರ ಬೆಳೆದಂತೆ
ಅಪ್ಪನ ಸಮವೆಂದು ಭಾವಿಸಿದೆನು
ಅಡುಗೆ ಮನೆಯ ಡಬ್ಬದಲ್ಲಿದ್ದ ದುಡ್ಡನ್ನು
ಪೆಟ್ಟಿ ಅಂಗಡಿಯ ಪಾಲು ಮಾಡಿದೆನು
ನಾನಿದ್ದೆ ನಾನಾಗಿ
ಆದರೆ ಬದಲಾದೆ ಏನಾಗಿ ?
ನವಿಲ ಗರಿಯಂತಿದ್ದ ಗುರುವನ್ನು
ಕಾಗೆಯ ಪುಕ್ಕವೆಂದು ದೂಡಿದೆನು
ಚಿಲ್ಲರೆ ಎಂದು ತಿಳಿದ ದುಡ್ಡನ್ನು
ಚೆಲ್ಲಾ ಪಿಲ್ಲಿ ಮಾಡಿ ಅಲೆದೆನು…..
ನಾನಿದ್ದೆ ನಾನಾಗಿ
ಆದರೆ ಬದಲಾದೆ ಏನಾಗಿ ?
ಮತ್ತೇರಿದ ಆನೆಯಂತೆ
ನಡೆದಿದ್ದೆ ದಾರಿ ಎಂದೆ,
ಹಿಂತಿರುಗಿ ನೋಡಿದಾಗ
ಕೊಚ್ಚೆ ದಾರಿಯೆಂದು ಅಳಲಿದೆನು…
ನಾನಿದ್ದೆ ನಾನಾಗಿ
ಆದರೆ ಬದಲಾದೆ ಏನಾಗಿ [...]

ಕೆಲವು ಚುಟುಕುಗಳು..!!

December 19, 2006

ಸಾಮ್ಯತೆ……..!!!
ನೀ ನನ್ನಿಂದ
ದೂರಾಗುತ್ತಿರುವುದಕ್ಕು
ನಾ ಸಾವಿಗೆ
ಹತ್ತಿರವಾಗುತ್ತಿರುವುದಕ್ಕು
ಅಂತಹ ವ್ಯತ್ಯಾಸವೇನಿಲ್ಲ….!
ಹಾರೈಕೆ……….!!!
ಹೃದಯಗಳೇ
ನೀವು ಕಳೆದುಕೊಂಡ
ಒಲವೆಲ್ಲ
ಇಂದಲ್ಲ ನಾಳೆ
ಉಲ್ಕೆಗಳ ರೂಪದಲ್ಲಿ
ಸುರಿದು ಬರಲಿ…..!
ತೃಪ್ತಿ……!!!
ನಲಿವೇ
ಆಗಬೇಕೆಂದಿಲ್ಲ
ನಿನ್ನೊಲವಿನ
ನೋವಾದರು ಸಾಕು…..!
ಮಾಯಗಾತಿ….!!!
ಬೆಂಬಿಡದೆ
ಕಾಡುತ್ತೇವೆಂದ ಕನಸುಗಳಿಗೆ
ನಿನ್ನ ಒಲವ ಕುರಿತು ಹೇಳಿದೆ..
ಪಾಪದ ಕನಸುಗಳು ಕನಸುಗಳು ಕೂಡ
ಕನವರಿಸುತ್ತಿವೆಯಂತೆ ನಿನ್ನ….!!!
ಗೆಜ್ಜೆ-ಹೆಜ್ಜೆ
ನನ್ನೊಳಗೆ ನೀ ಬಿಟ್ಟು ಹೋದ
ಗೆಜ್ಜೆಗಳಿಗು
ಹೆಜ್ಜೆಗಳಿಗು
ಅಂತಾ ವ್ಯತ್ಯಾಸವೇನಿಲ್ಲ !
ಹೆಜ್ಜುಗಳು ನಿನ್ನೊಲವ ವಿರಹಗೀತೆಗಳಾದರೆ
ಗೆಜ್ಜೆಗಳು ನಿನ್ನೊಲವ ಪ್ರೇಮಗೀತೆಗಳು..