೧. ಪ್ರೇಮಲೋಕದ ಪಾಲಿನ ಅತ್ಯಂತ ಪವಿತ್ರ ಮಾತೆಂದರೆ, ನೀನಿಲ್ಲದೇ ಬದುಕುವುದಿಲ್ಲ ಅನ್ನುವುದಲ್ಲ, ಜೀವ ಬಿಡ್ತೀನಿ ಅನ್ನುವುದೂ ಅಲ್ಲ, ಬದಲಾಗಿ “ನೀನೇ ಹೇಳು ನೀನೇ ಹೇಳು” ಅನ್ನುವುದು.
೨. ನವಿಲೂರಿನ ಹುಡುಗಿಯೊಬ್ಬಳು ಯಾರನ್ನೋ ಮದುವೆಯಾಗಿ ಹೊಸ ಬದುಕಿನ ಹೊಸ್ತಿಲೊಳಗೆ ಒಂದು ಹೆಜ್ಜೆ ಇಡುತ್ತಿರುವಾಗಲೇ ಅದೇ ಊರಿನ ಮುಗ್ಧ ಹುಡುಗನೊಬ್ಬ ಬದುಕಿನಿಂದಾಚೆ ಹೆಜ್ಜೆಯಿಟ್ಟು ತುಂಬ ದಿನಗಳಾಗಿದ್ದವು.
೩. ಪ್ರೇಮಿಗಳ ಎದೆಗಳೊಳಗೆ ಕಾಮನೆಗಳು, ಬಯಕೆಗಳು, ಕನಸುಗಳು,ಹಲವಾರು ತುಡಿತ, ಕಣ್ಣೀರು ಸುಖ ಸಂತೋಷಗಳು ತುಂಬಿಕೊಳ್ಳುವುದರ ಜೊತೆಗೆ ಮಗುವೊಂದು ಮಲಗಿಕೊಳ್ಳಬೇಕಂತೆ.
೪. ಹೊಸದಾಗಿ ಮದುವೆಯಾಗಿದ್ದರು..! ಬೆಳಗ್ಗೆ ಎದ್ದ ಕೂಡಲೇ ಹುಡುಗ ಅವಳ ಮುಖ ನೋಡಬೇಕೆಂದುಕೊಂಡರೆ ಅವಳಿಲ್ಲ. ಕೋಪದಿಂದ ತುಳಸಿ ಪೂಜೆ ಮಾಡುತ್ತಿದ್ದವಳನ್ನ ಎಳೆದುಕೊಂಡು ಹೋಗಿ ತಬ್ಬಿಕೊಂಡು ಉಸಿರುಗಟ್ಟಿಸಿದ.
೫. ಯಾವತ್ತೂ ಕಣ್ಣೀರು ಹಾಕುವುದಿಲ್ಲವೆಂದು ಹುಡುಗನ ನೆತ್ತಿ ಮುಟ್ಟಿ ಪ್ರಾಮಿಸ್ ಮಾಡಿದ್ದಳು. “ನಿಂಗೆ ನನ್ ಮೇಲೆ ಸ್ವಲ್ಪಾನು ಪ್ರೀತಿಯಿಲ್ಲ” ಅಂತ ಹುಡುಗ ಅಂದಕೂಡಲೇ ಕಣ್ಣೀರಾಗಿದ್ದಳು.
೬. ಅವನಿಗೆ ಒಳ್ಳೆಯದಾಗಲಿ ಅಂತ ಪೂಜೆ ಮಾಡಿಸಲು ಸರತಿ ಸಾಲಿನಲ್ಲಿ ಅವಳು ನಿಂತಿದ್ದಳು. ಮಧ್ಯಾಹ್ನವಾದರೂ ಅವಳ ಸರದಿ ಬರಲಿಲ್ಲ. ಅವನ ನೆನಪಾಗಿ ಮನೆಗೆ ಹೋದವಳ ಮೇಲೆ ದೇವರು ಮುನಿಸಿಕೊಂಡ. ಆದರೆ ಅವನು ಮುದ್ದಿಸಿದ.
೭. ಪ್ರೀತಿಯ ಲೋಕದ ಜಗಳ, ಮುನಿಸು,ಕೋಪ,ವಿರಹ,ಕಣ್ಣಿರು ಇವುಗಳ ಅಂತ್ಯ ಸಂಸ್ಕಾರಕ್ಕೆ “ನಾಳೆ ಸಿಕ್ತೀನಿ ಬಿಡು” ಅನ್ನುವ ಮಾತೆ ಉತ್ತಮ ಪುರೋಹಿತನಂತೆ.
೮. ಅವನು ಸಂಜೆ ಅವಳ ಮುಡಿಗೆ ಮಲ್ಲಿಗೆ ತರುವುದನ್ನ ಮರೆತಂತೆ ನಾಟಕವಾಡಿದ. ಆದರೆ ಅವಳು ಅವನ ತಬ್ಬಿಕೊಳ್ಳದೇ ನಾಟಕವಾಡಲು ಮನಸ್ಸಾಗಲಿಲ್ಲವಂತೆ.
೯. ಊಟಕ್ಕೆ ಕುಳಿತಿದ್ದ ಪ್ರೇಮಿಗಳಿಬ್ಬರಿಗೆ ಬಿಕ್ಕಳಿಕೆ ಶುರುವಾಯಿತು.ಸ್ನೇಹಿತರು ತಲೆಯ ಮೇಲೆ ಮೊಟಕಿದರು, ನೀರು ಕುಡಿಸಿದರು, ಬಿಕ್ಕಳಿಕೆ ನಿಲ್ಲಲಿಲ್ಲ. ಆದಷ್ಟು ಬೇಗ ಇಬ್ಬರ ಮದುವೆಗೆ ಪುರೋಹಿತರನ್ನ ಹುಡುಕುವ ಬಗ್ಗೆ ಒಂದೆರೆಡು ಮಾತನಾಡಿದ ಕೂಡಲೇ……….!!!
೧೦. ಹುಡುಗಿ ಯಾವುದೋ ಧ್ಯಾನದಲ್ಲೋ ಇನ್ಯಾರದೋ ನೆನಪಿನಲ್ಲೋ ಅರಳಿಕಟ್ಟೆಗೆ ಮೂರು ಸುತ್ತು ಹಾಕುತ್ತಿದ್ದಳು. ಅರಳಿಕಟ್ಟೆಯ ಮುಂದೆ ಚಪ್ಪಲಿ ಹೊಲೆಯುತ್ತ ಕುಳಿತಿದ್ದ ಅವನು ಅವಳ ಸುತ್ತಿದ್ದಕ್ಕೆ ಲೆಕ್ಕವಿನ್ನು ಸಿಕ್ಕಿಲ್ಲ.
( ವಿಜಯ ಕರ್ನಾಟಕ ಪತ್ರಿಕೆಯ ಫೆಬ್ರವರಿ ೧೪, ಸಿಂಪ್ಲಿ ಸಿಟಿ ಪೇಜ್, ಪ್ರೇಮಿಗಳ ದಿನದ ವಿಷೇಶಾಂಕಕ್ಕೆ ಸುಮ್ಮನೆ ಗೀಚಿದ್ದು)
ನವಿಲುಗರಿ ಮೆಚ್ಚಿದವರ(?) ಮಾತು !