Archive | ಕವನಗಳು RSS feed for this section

ಹೆಜ್ಜೆಗಳು ಕೇಳಿದ ಪ್ರಶ್ನೆಗೆ ಉತ್ತರಿಸದವನು !

4 ಫೆಬ್ರ

ಈ ಎದೆಯೊಳಗಿನಿಂದ
ಜಾರಿ ಬೀಳುತ್ತಿರುವ
ಒಂದೊಂದು ನೆನಪುಗಳಿಗೂ
ಕಾಲಿಗೆ ಬಿದ್ದವನು..!

ಆತ್ಮಸಾಕ್ಷಿಗೆ ಪೆಟ್ಟಾಯಿತೆಂದು
ಮತ್ತೆ ಎದ್ದು ನಿಂತು
ಬಲವಂತದ ನಗು ಮೊಗ ಹೊತ್ತವನು..!

ಮತ್ತೆ ಉತ್ತರಿಸಿಕೊಂಡು
ಬಂದ ನಿನ್ನ ನೆನಪುಗಳಿಗೆ
ಶರಣಾಗಿ ಸೋತೆನೆಂದವನು..!

ನೀನು ಮಾಡಿದ ಎಲ್ಲಾ
ಗಾಯಗಳಿಗೂ ನಿನ್ನ ಪ್ರೀತಿಯ
ಮುಲಾಮು ಹಚ್ಚಿದವನು,
ಮತ್ತೆ ಎಲ್ಲ ಗಾಯಗಳಿಗೂ
ನನ್ನ ಗೆಳತಿಯ ಮಚ್ಚೆಗಳೆಂದು
ಹೊಸ ಹೆಸರನಿಟ್ಟವನು..!

ಜೊತೆ ನಡೆದ ೩
ಹೆಜ್ಜೆಗಳನ್ನೆ ೩
ಜನ್ಮಗಳು ಅಂದುಕೊಂಡವನು.
ನೀನಿಲ್ಲದೇ ಒಂಟಿಯಾದ
ಈ ಹೆಜ್ಜೆಗಳು ನಿನ್ನ ಕುರಿತಾಗಿ
ಕೇಳಿದ ಪ್ರಶ್ನೆಗಳಿಗೆ
ಉತ್ತರಿಸಲಾಗದೇ ಸೋತವನು

ನನ್ನ ಮುಂದಿನ ಬದುಕಲ್ಲಿ ನೀವು ನನ್ನಜೊತೆ ಇರ್ತೀರ?

14 ಜನ

ಜಗತ್ತಿನ ಸಾಧಾರಣ ಸುಂದರಿ,ಹಾಗು ನನ್ನಜಗತ್ತಿನ ದೀಪಿಕ,ಐಶು,ಜಿಂಟಾ,ರಾಧಿಕ,ರಮ್ಯ,ದಿವ್ಯ,ಸೌಮ್ಯ ಕಾವ್ಯರಿಗಿಂತಲೂ ಎರಡು ಕೈ ಮಿಗಿಲಿಲಾದ, ಜಗತ್ತಿನಎಲ್ಲ ಪೋಲಿ ಹುಡುಗರ ಪಾಲಿನ ಸೋದರಿ,ಹಾಗು ನನ್ನ ಪಾಲಿನ,ಪುಟ್ಟಿ,ಪಾಪು, ಜಾನು ಮುದ್ದು, ಲವ್ಲಿ,ಬಂಗಾರು,ಸೋ ಸ್ವೀಟಿ ಚೂಟಿಯಾದ, ರಾಜಾಜಿ ನಗರದದಗ್ರೇಟ್ ವಿವೇಕಾನಂದಕಾಲೇಜಿನ,ಸಮಸ್ತ ಸುಂದರ ಸುಂದರಿಯರ ಪಾಲಿನ ಸುಹಾಸಿನಿಯಾದ, ಹಾಗು ಕಬ್ಬನ್ ಪೇಟೇ ಅವಿನ್ಯೂರೋಡಿನ ಲೋಟಸ್ ಫ್ಯಾನ್ಸಿ ಸ್ಟೋರಿನಯಜಮಾನಿಯಾದ, ಎಲ್ಲಕ್ಕಿಂತಲೂ ೨೦೧೨ ಮಾರ್ಚ್ ೧೪ ಮತ್ತು ೧೫ರಂದು ನನ್ನ ಮೊದಲ ಹಾಗು ಕೊನೆಯ ಹೆಂಡತಿಯಾಗುವತಯಾರಿಯಲ್ಲಿರುವ ಹಾಗು, ೨೦೧೩ ಮಾರ್ಚ್ ೧೪ ಅಥವ ೧೫ರಂದು ನನ್ನ ಮುದ್ದು ಮಗುವಿನ ತಾಯಿಯಾಗಲುಗಡಿಬಿಡಿಯಲ್ಲಿರುವ,ನನ್ನ ಪ್ರೀತಿಯ ನಳಿನಿ ಮೇಡಮ್‌ಗೆ, ಈ ಪತ್ರದ ಮೂಲಕ ಲವ್ ಯೂಅಂತ ಹೇಳ್ತಾ ಇದ್ದೀನಿ,ಜೊತೆಗೆ ಮೊನ್ನೆತಾನೆ ಆಚರಿಸಿಕೊಂಡ ನಿಮ್ಮ ಬರ್ಥ್‌ಡೇ ಗೆ ವಿಷ್ ಮಾಡಲಾಗದ ನನ್ನ ಮರೆಗುಳಿತನವನ್ನ ಕ್ಷಮಿಸಿ ಮೇಡಂಅನ್ನುತ್ತ ಮತ್ತೊಮ್ಮೆ ಲವ್ ಯೂಅಂತಿದ್ದೀನಿ,

ಚಿನ್ನಾ, ಈ ಬದುಕು ನನ್ನನ್ನಎಲ್ಲಿಂದಎಲ್ಲಿಗೆಕರೆದುಕೊಂಡು ಬಂತುಅಂತಯೋಚಿಸುತ್ತಾ ಹೊರಟರೆಅದೇ ನಾಲ್ಕು ಮಾಂಗಲ್ಯ,ಐದುರಂಗೋಲಿ ಸೀರಿಯಲ್ಲುಗಳ ಎಪಿಸೋಡುಗಳಾಗುವಷ್ಟು ಸರಕಾಗುತ್ತದೆ,ನನ್ನಂತ ಸಾಧಾರಣ ಹುಡುಗನಿಗೆ,ನಿಮ್ಮಂತ ಸಿಂಪಲ್ ಡಿಂಪಲ್ ಸೂಪರ್ ಹುಡುಗಿಯನ್ನಜೊತೆ ಮಾಡ್ತಇರೋ ನಮ್ಮಎರಡೂ ಮನೆಯವರಿಗೆಥ್ಯಾಂಕ್ಸ್ ಹೇಳ್ಬೇಕು ಅನ್ನಿಸ್ತಿದೆ. ನನಗೆಂತ ಹೃದಯ ಬೇಕು ಅಂದುಕೊಂಡಿದ್ದೆನೋಅದೇ ಹೃದಯವನ್ನ ನನ್ನಜೊತೆ ಮಾಡ್ತಿರೋದೇವರಿಗೆಇಲ್ಲಿಂದಲೇ ನನ್ನ ನೂರು ಧನ್ಯವಾದಗಳನ್ನ ಇಲ್ಲಿಂದಲೇರವಾನೆ ಮಾಡ್ತಿದ್ದೀನಿ ಮುದ್ದು.ಗೊತ್ತುಗುರಿಯಿಲ್ಲದೆ ಸಾಗುತ್ತಿದ್ದ ನನ್ನ ಬದುಕಿನೊಳಗೆ ನಿಮ್ಮ ಮೊದಲ ಹೆಜ್ಜೆಯಿಟ್ಟು ಬರ್ತಿದ್ದೀರಿ, ಐವತ್ತುಕೇಜಿ,ಪ್ರೀತಿ,ನೂರುಕೇಜಿ ಮಮತೆ, ಟನ್ನುಗಟ್ಟಲೆ ನಂಬಿಕೆಯನ್ನ ಹೊತ್ತುಕೊಂಡು ನನಗೋಸ್ಕರ ಬನ್ನಿ ನಳಿನಿ ಮೇಡಮ್. ಅದರಜೊತೆಗೆ ಕೆಲವು ಗ್ರಾಮುಗಳಷ್ಟು ನೋವನ್ನುತಂದು ನನ್ನೆದೆಗೆ ಸುರಿದುಬಿಡಿ, ಹೇಗಿದ್ದರು ಅತ್ತು ಹಗುರಾಗಲಿಕ್ಕೆ ನಿಮ್ಮ ಮಮತೆತುಂಬಿದ ಮಡಿಲುಇದ್ದೇಇದೆ.

ಒಂದು ಬದುಕನ್ನಕಟ್ಟಲಿಕ್ಕೆ ಹೊರಟಿದ್ದೀವಿ, ನಮ್ಮ ಸಿಟ್ಟು ಸೆಡವು ಕೋಪ ತಾಪ,ಅಹಮ್ಮು,ಅಹಂಕಾರಗಳನ್ನ ಮೂಟೆಕಟ್ಟಿ ಪಕ್ಕಕ್ಕೆತ್ತಿಬಿಡೋಣ, ಒಂದು ಮುತ್ತಾದರೂ ಸರಿಒಂದುತುತ್ತಾದರೂ ಸರಿ, ಇಬ್ಬರೂ ಹಂಚಿಕೊಳ್ಳೋಣ, ಯಾರುಯಾರನ್ನೂ ಹಚ್ಚಿಕ್ಕೊಳ್ಳಲಾಗದಷ್ಟು ಹಚ್ಚಿಕ್ಕೊಳ್ಳೋಣ,ಮೆಚ್ಚಿಕ್ಕೊಳ್ಳೋಣ, ತಪ್ಪು ನನ್ನದಿದ್ದರೂಚಿಂತೆಯಿಲ್ಲ ನಾನೇ ಕ್ಷಮೆ ಕೇಳ್ತೀನಿ, ತಪ್ಪು ನಿಮ್ಮದಿದ್ದರೂ ಪರ್ವಾಗಿಲ್ಲ, ಲವ್ ಯು ಮುದ್ದುಅಂತ ನಾನೆ ಮುದ್ದು ಮಾಡ್ತೀನಿ, ಆದ್ರೆ ಕೆಲವೊಂದು ಸಲ ನಿಮಗೆ ದುರಾಸೆ, ಎರೆಡೆರೆಡು ಮಕ್ಕಳು ಬೇಕು ಅಂತ ನನ್ನಜೊತೆ ಜಗಳಕ್ಕೇ ನಿಲ್ತೀರಿಅಲ್ವ? ಪ್ರೀತಿಯಿಂದ ಜಗಳ ಆಡೋಕೆರೆಡಿಇದ್ದೀರ ಹೇಳಿ ನಾನು ತಯಾರಾಗೇ ಇದ್ದೀನಿ, ಒಂದೇ ಮಗು ಸಾಕು ಅನ್ನುವ ನನ್ನಜನ್ಮ ಸಿದ್ಧ ಹೋರಾಟದಲ್ಲಿಯಾವುದೇ ಬದಲಾವಣೆಯಿರುವುದಿಲ್ಲ ತಿಳ್ಕೊಳ್ಳಿ ಅಷ್ಟೆ.

ತುಂಬಾ ಭಾವುಕ ಹುಡುಗನಂತೆ ನಾನು, ನನಗೆ ಯಾವುದೂ,ಯಾರೂಗ್ರೇಟ್‌ಅನ್ನಿಸೋದೆಇಲ್ವಂತೆ.ಎಲ್ಲದಕ್ಕು ಸ್ವಲ್ಪಅತಿಯಾಗಿರಿಯಾಕ್ಟ್ ಮಾಡ್ತೀನಂತೆ, ಅದೇಕಾರಣಕ್ಕೆಯಾರೂ ನನ್ನನ್ನ ಅಷ್ಟಾಗಿ ಹಚ್ಚಿಕ್ಕೊಳ್ಳಲಿಲ್ಲ, ನನ್ನ ಪ್ರಪಂಚ ನನ್ನದು, ನನ್ನ ಬದುಕು ನನ್ನದುಅಂತ ನಾನು ಕೂಡಯಾರನ್ನೂ,ಯಾವುದನ್ನು ಅಷ್ಟು ಸುಲುಭವಾಗಿ ಮೆಚ್ಚಿಕ್ಕೊಳ್ಳಲಿಲ್ಲ. ಮುಂಗೋಪಿ ಅಂದ್ರು, ಭಾವನೇಗಳೇ ಇಲ್ಲದಯಾವುದೋ ಪ್ರಪಂಚದಜೀವಿ ಅಂದ್ರು ಐ ಡೋಂಟ್‌ಕೇರ್‌ಚಿನ್ನ, ನಾನು ಏನಂತ ನನಗೆ ಮಾತ್ರಗೊತ್ತು, ನನ್ನ ಮುಂದಿನ ಬದುಕಲ್ಲಿ ನೀವು ನನ್ನಜೊತೆಇರ್ತೀರಅನ್ನೊ ಸಂಗತಿಯೇತುಂಬಾ ಖುಷಿ ಕೊಡ್ತಿದೆ, ಇನ್ನು ಈ ಬದುಕಿನ ಪುಟಗಳೊಳಗೆ ಏನು ಬರುತ್ತೋ ಬರಲಿ, ಎಲ್ಲವನ್ನೂ ನಿಮ್ಮಜೊತೆಗೂಡಿ ಎದುರುಗೊಳ್ತೀನಿ, ಪ್ರಪಂಚದಲ್ಲಿ ಪ್ರೀತಿಅನ್ನೊ ಪ್ರಶ್ನೆಗೆಕೋಟ್ಯಾಂತರ ಉತ್ತರಗಳಿರಬಹುದು, ಆದರೆ ನನ್ನ ಪ್ರಪಂಚದ ಪ್ರೀತಿ,ನಂಬಿಕೆ,ಮಮತೆಅಂದ್ರೆ ,ಎಲ್ಲವೂ ನೀವೆ ಮೇಡಮ್. ಪರಿಚಯವಾದ ಇಷ್ಟೇ ದಿನಗಳನ್ನ ಅದೆಷ್ಟೋಜನುಮದ ಪ್ರೀತಿ ಮಮತೆ ತೋರಿಸಿದ್ದೀನಿ, ನಂಬಿಕೆ ಹುಟ್ಟಿಸಿದ್ದೀರಿ, ಇದೆಲ್ಲವನ್ನು ನಾವು ನಮ್ಮ ಬದುಕಿನ ಮುಸ್ಸಂಜೆಯವರೆಗೂ ಉಳಿಸಿಕೊಳ್ಳೋಣ ಏನಂತೀರಿ. ?

 

nimma

M

ನೀನು ನನಗೆ

7 ಸೆಪ್ಟೆಂ

( ವಿಶೇಷ ಸೂಚನೆ. ಈ ಸಾಲುಗಳನ್ನ ಸುಮ್ಮನೇ ಗೀಚಿದ್ದು, ಕವಿತೆ ಅಂದುಕೊಂಡು ಓದಿದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು)

ನೀನು ನನಗೆ ಮುಡಿಯಲಾರದ ಹೂವು
ಮರೆಯಲಾರದ ನೋವು
ಎದುರು ನೋಡುತ್ತಿರುವ ಸಾವು
ನೀನು ಗಾಳಿಗೆ ತೂರಿದ ನೀತಿ
ಪ್ರಾಮಾಣಿಕವಲ್ಲದ ಪ್ರೀತಿ.

ನೀನು ನನಗೆ ನೋವಿನ ಅಕ್ಷಯಪಾತ್ರೆ
ಹೃದಯದ ಸಣ್ಣ ನೋವಿಗೂ ಸ್ಪಂದಿಸದ
ನಿರಾಸೆಯ ಮಾತ್ರೆ.
ಯಾರೂ ನೋಡಲಾಗದ ಹಾಳೂರಿನ ಜಾತ್ರೆ
ಎಂದೂ ಮುಗಿಯದ ಅಂತಿಮ ಯಾತ್ರೆ.

ನೀನು ನನಗೆ ಮರೆತುಬಿಡುವಂತಹ ಚಿತ್ರ
ನಾನು ಒಂದಕ್ಷರವೂ ಓದಲಾಗದ ಪತ್ರ
ಸರಿಯಾದ ಪ್ರಶ್ನೆಗೆ ತಪ್ಪು ತಪ್ಪು ಉತ್ತರ
ಕೈಗೂಡದ ಕನಸುಗಳಿತೆ ತುಂಬ ಹತ್ತಿರ.

ನೀನು ನನಗೆ ಬೆಳಕಿನ ಕತ್ತಲು
ಭಾವನೆಗಳ ಪೂರ್ತಿ ಬೆತ್ತಲು
ನೀನು ನನಗೆ ಅಮವಾಸ್ಯೆಯ ಚಂದಿರ
ದೇವರಿಲ್ಲದ ಮಂದಿರ,
ಭರವಸೆಗಳೆ ಇಲ್ಲದ ಖಾಲಿ ಖಾಲಿ ಬಟ್ಟಲು
ಬದುಕಿನ ರೇಸಿನಲ್ಲಿ ಸಿಕ್ಕ ಸೋಲಿನ ಮೆಡಲ್ಲು.

ನೀನು ಆಸೆಗಳ ಮುಳುಗಿಸಿದ ಕಡಲು
ಆಸರೆಯಾಗದೇ ಹೋದ ಒಡಲು
ನಿದ್ದೆ ಬಾರದ ಮಡಿಲು
ನೀನು ನನಗೆ ಒಂದು ಸುಂದರ ಸಜ
ಆದರೂ ನಾನು ಪ್ರೀತಿಸಿದ್ದು ಎಷ್ಟೊಂದು ನಿಜ.

ಕವಿತೆ ಕಳೆದು ಹೋಗಿದ

9 ನವೆಂ

ಮೊದಲು ತೊದಲುತ್ತ ಬೆರೆದಿದ್ದ
ಬರೆಯಲಾರದೆ ಬಿಕ್ಕಿ ಅತ್ತಿದ್ದ
ಎರಡು ಸಾಲು ಬರೆಯಲೂ
ಲೆಕ್ಕವಿಲ್ಲದಷ್ಟು ನೆನಪು ಮಾಡಿಕೊಂಡು
ಅರ್ದ ಬರೆದಿಟ್ಟಿದ್ದ ಕವಿತೆ ಕಳೆದು ಹೋಗಿದೆ.

ಅಲ್ಲಿ ಬರೆದ ಒಂದು ಸಾಲು
ಒಂದಕ್ಷರ ಏನೆಂದರೇನೂ ನೆನಪಿಲ್ಲ
ಅಲ್ಲಿ ನಾನು ಬರೆದ ಸಾಲುಗಳಿಗಿಂತ
ಬರೆಯದೇ ಉಳಿಸಿಕೊಂಡ ಸಾಲಿನ
ಸಾಲ ತೀರಿಸಲಾರದ ಕವಿತೆ ಕಳೆದುಹೋಗಿದೆ.

ಅವಳು ನನಗಂತಲೇ
ಬಿಟ್ಟು ಹೋದ ಎಂದೂ
ಮುಗಿಯದ ವಿರಹವನ್ನು
ಕೇವಲ ಮೂರು ಸಾಲುಗಳಲ್ಲಿ ಬರೆದ
ಕವಿತೆ ಕಳೆದು ಹೋಗಿದೆ.

ಅವಳೊಂದಿಗೆ ಕಳೆದ
ಕೆಲವೇ ಕೆಲವು ಕ್ಷಣಗಳನ್ನ
ನನ್ನಿಡೀ ಬದುಕಿಗೆ ವಿಸ್ತರಿಸಿಕೊಂಡ
ಕೆಲವು ಮಾಯಾವಿ ಸಾಲುಗಳ
ಕವಿತೆ ಕಳೆದು ಹೋಗಿದೆ.

ನನಗೆ ಬೆನ್ನು ಮಾಡಿ
ಹೊರಟು ಹೋದವಳ
ಮೊಗದಲ್ಲಿ ಮೂಡಿದ
ಸಣ್ಣ ನಗೆಯನ್ನೂ
ಪ್ರೀತಿಸಿ ಬರೆದ ಸಾಲುಗಳ
ಕವಿತೆ ಕಾಣೆಯಾಗಿದೆ.

ತಾಯಿ ಮತ್ತು ದೇವರು ಹಾಗು
ಅವಳು ಸಮನಾರ್ಥಕ ಪದಗಳೆಂದು
ಹೇಳಿ ನನೊಳಗೆ ಸುಖಿಸಿದ
ಸಾಲುಗಳ ಕವಿತೆ ಕಳೆದು ಹೋಗಿದೆ.

ದೂರಾಗುವ ಮಾತು ನೀನಾಡಿದ
ಕೂಡಲೇ ನಾನು ನಿನ್ನ ಕಾಲಿಗೊರಗಿ
———————-
———————-
ಆ ಕವಿತೆ ಕಳೆದು ಹೋಗಿದೆ
ಬದುಕು ಮುಂದುವರಿಯಬೇಕಿದೆ
ಕವಿತೆ ಬೇಕಿದೆ.

ಅವಳು

1 ನವೆಂ

ಕೆಲವೊಮ್ಮೆ
ಬಳ್ಳಾರಿ ಸೀಮೆಯ ಬಿಸಿಲು
ಮತ್ತೊಮ್ಮೆ
ಮಲೆನಾಡ ಬಾಳೇಗಿಡದ
ಟಿಸಿಲು.

ಒಪ್ಪಿಕೊಂಡರೆ ಎದೆಯೊಳಗೆ
ಡಜನ್ಗಟ್ಟಲೇ ಮುಗಿಲು.
ತಬ್ಬಿಕೊಂಡರೆ ಆಹಾ
ಕಲ್ಲೆದೆಗೂ ಎಂಥಹ ದಿಗಿಲು.

ನಾನು ಒಮ್ಮೊಮ್ಮೆ
ತುಂಟನಾದಾಗ
ಅವಳು ಹುಡುಗಿ
ಬೇಲೂರು.
ಒಳಗಣ್ಣ ತೆರೆದಾಗ
ಅವಳು ಗೌರಿ ನಮ್ಮೂರು.

ಆಹಾ ಹಿಂಡಿಬಿಡಬೇಕು
ಸಂಪಿಗೆಯಂತಹ ಮೂಗು.
ಹಾಗೆ ನಕ್ಕರಂತೂ
ಹೋಟೇಲ್ ಆಂದ್ರಾ ಶೈಲಿಯ ಸಾಗು.

ಕಾಣುತ್ತಾಳೆ ಒಮ್ಮೊಮ್ಮೆ
ಹೇಗೆಂದರೆ ಮಗು ಅತ್ತರೆ..
ಅಳಲಿ ನಗಲಿ ಬಿಡು
ಮಾರಾಯ ತುಟಿ ಸಕ್ಕರೆ.

ಬಿಸಿಲ ದೇಶ

20 ಆಕ್ಟೋ

ಕೇವಲ ತಿಂಗಳು ದಿನಗಳ
ಲೆಕ್ಕದಲ್ಲೇ ನಿಮ್ಮಂತವರ
ಆಸ್ತಿಯೆಲ್ಲ ಮಾಗಿ,
ವರ್ಷ ಪೂರ್ತಿ ಬಾಗಿ ದುಡಿದರೂ
ಬಿಸಿಲ ದೇಶದ ಇವರು ನಿತ್ಯ ರೋಗಿ.

ಬಗೆದು ಅಗೆದು ಬಿಟ್ಟಿರಿ
ತಾಯೊಡಲ, ತುಂಬಬಹುದು
ನಿಮ್ಮ ರೊಕ್ಕದ ಚೀಲ,
ಅಳುವ ಕಂದನ ಒಣಗಿದ
ತುಟಿಯ ಒರೆಸಲು ಲೊಳ್ಳೆ ಹಾಲಿಗೂ
ದೊರಕುತ್ತಿಲ್ಲ ರೂಪಾಯಿ ಸಾಲ.

ತನ್ನೊಡಲ ತುಂಬಿಕೊಂಡ
ನಿಮ್ಮ ರೊಕ್ಕದ ಚೀಲ
ಹಾಕುತ್ತಿರಬಹುದು ಕೇಕೆ,
ಅರೆ ಹೊಟ್ಟೆ ಮಗುವ, ಅರೆ ಬಟ್ಟೆ ತಾಯ ನೋಡಿ
ಮೊಸಳೆ ನೀರು ಸುರಿಸಿದರೆ ಸಾಕೆ?

ಸಾಕು ದಯಮಾಡಿ ಕೃಪೆ ತೋರಿ
ಭೂಮಿ ತಾಯ ಸೆರಗನ್ನು ಬಿಡಿ,
ಅದೋ ನೋಡಿ ಅಳುವ ಮಗುವಿನ
ಹಾಲಿಗೆ ಎರಡು ರೂಪಾಯಿಯನ್ನಾದರೂ ಕೊಡಿ.

ಪೋಲಿ

28 ಸೆಪ್ಟೆಂ

ಅವಳ ಬಿರಿದ ಮಲ್ಲಿಗೆ ಎದೆಯ
ಹಾಗೆ ನೋಡದಿರು ಗೆಳೆಯ.
ನೋಯದೇ ಇದ್ದೀತೆ, ಯಾರ ಕಣ್ಣೂ
ಬೀಳದಿರಲೆಂದು ಲಟಿಗೆ ತೆಗೆದು
ಮಗಳ ಹೊರಗೆ ಕಳುಹಿಸಿದ ತಾಯ ಹೃದಯ.

ನೋಡ ನೋಡುತ್ತಲೆ ಅವಳ
ತುಟಿಯ ಸವಿಯುವ ನಿನ್ನ
ದುರಾಸೆಯ ಆಚೆ ಚೆಲ್ಲು,
ಅವಳದೆಲ್ಲವ ಸವಿಯುವ ಅವಳ
ರಾಜಕುಮಾರನಿದ್ದರೂ ಇರಬಹುದು
ದೂರ ನಿಲ್ಲು.

ಕನಸಿನಲ್ಲಿಯೇ ಮೈಬಳಸಿ
ತೋಳ್ಬಳಸಿ ಅವಳದೆಲ್ಲವ
ಪಡೆದ ಕನಸು ಕಾಣಬೇಕೇ?
ಇನ್ನು ಚಿಕ್ಕ ಹುಡುಗಿ ಮಲ್ಲಿಗೆಯಂತ ಕೂಸು
ನಿಮ್ಮಂತವರ ವಿಕೃತವ ನೋಡಬೇಕೆ?

ಕೈಮುಗಿವೆ ದಯಮಾಡಿ
ಹಾಕಿಕೊಳ್ಳಿ ನಿಮ್ಮಾಸೆಗಳಿಗೆಲ್ಲ ಬೇಲಿ.
ನನಗದು ಅನ್ವಯಿಸುವುದಿಲ್ಲ
ನಾನಂತೂ ಹುಟ್ಟು ಪೋಲಿ.

ಎದೆಯ ಅಣೆಕಟ್ಟು ಕಟ್ಟೆಯೊಡೆಯುತ್ತಿದೆ

30 ಡಿಸೆ

ನಾನು ನಿನ್ನ ರಸ್ತೆಯಲ್ಲಿ
ಕೊನೆಯವರೆಗೂ ಸಾಗಬೇಕಿತ್ತು,
ಮದ್ಯೆ ಮದ್ಯೆ ದಾರಿ ಹರಿದಿತ್ತು
ಮತ್ತೆ ಬೆಳಕು ಮುನಿದಿತ್ತು.
ಪೂರ್ತಿಯಾಗುವ ಮೊದಲೆ
ಪ್ರಯಾಣ ಮುಗಿದಿತ್ತು.

ನಿನಗೇ ಅಂತ ನಾನು
ಬರೆದಿಟ್ಟ ಹಾಡುಗಳ
ಎಲ್ಲಾ ಸಾಲುಗಳು
ಅಳಿಸಿಹೋಗಿದ್ದವು
ಮತ್ತೆ ಬೆರೆಯೋಣವೆಂದರೇ
ನೀನು ನೆನಪಾಗುತ್ತಿದ್ದಿಯಾ
ಮತ್ತೆ ನೆನಪಾಗುತ್ತಿಲ್ಲ!

ಹಾಗೆ ಒಂದು ಸಲ ಅತ್ತು
ಬಿಡೋಣವೆಂದು ಕೊಂಡರೇ
ನಿನಗೆ ಕೊಟ್ಟ ಮಾತು, ಮತ್ತೆ
ಅತ್ತಾಗ ನೀನಿಟ್ಟ ಮುತ್ತು ನೆನಪಾಯಿತು.!
ದುಃಖ ನುಂಗಿಕೊಂಡೆ..ಅದರೂ
ಮಾತು ಉಳಿಸಿಕೊಳ್ಳಲಾಗುತ್ತಿಲ್ಲ
ಎದೆಯ ಅಣೆಕಟ್ಟು ಕಟ್ಟೆಯೊಡೆಯುತ್ತಿದೆ !

ಎಲ್ಲಾ ನೆನಪುಗಳಿಗೂ
ಒಂದು ಸಮಾಧಿ ಕಟ್ಟಿಸಬೇಕು!
ಎಲ್ಲಾ ಹನಿಗಳಿಗೂ ಒಂದು
ದೊಡ್ಡ ನದಿಯ ಹುಡುಕಬೇಕು !
ಮತ್ತೆ ನಾನು ದೂರ ದೂರ ಹೋಗಬೇಕು
ಕ್ಷಮಿಸು ಅಲ್ಲಿ ನೀನು ನೆನಪಾಗೊಲ್ಲ
ಮತ್ತೆ ನೆನಪಾಗಬಾರದು ಕೂಡ!

ಅವನ ವಿಳಾಸ ಮರೆತಿದ್ದೀನಿ.

10 ಆಕ್ಟೋ

ಮೊದಲು ಇವನಿಗೆ ನನ್ನ
ಗಿಲಿ ಗಿಲಿ ಗೆಜ್ಜೆಗಳ ಸದ್ದು
ಮತ್ತೆ ನನ್ನ ಕೈಬಳೆಗಳ
ಅದೆಂತದೋ ನಾದ ಕೂಡ
ಹುಚ್ಚೆಬ್ಬಿಸುತ್ತಿತ್ತು.

ಅದ್ಯಾವುದೋ ಮದದಲ್ಲಿ
ಗೆಜ್ಜೆ ಕಿತ್ತಾದ ಮೇಲೆ ಮತ್ತೆ
ಕೈಬಳೆಗಳು ಚೂರಾದ ಮೇಲೆ
ಈಗ ಒಂಚೂರು ಹಾಗೆಲ್ಲ ಇಲ್ಲವಂತೆ.

ಮೊದಲಾದರೇ ಸುಮ್ಮನೆ
ನನ್ನ ಕಣ್ಣುಗಳ ನೋಡಿಯೇ
ಕುಣಿಯುತ್ತಿದ್ದ ಇಂವ,
ಈಗ ಒಂಚೂರು ನನ್ನಲ್ಲಿ
ನೋಡುತ್ತಾನ ಕೇಳಿ ನೋಡಿ?
ಕಾರಣವಿಷ್ಟೆ ಅವನು ಪ್ರೀತಿಸಿದ್ದು
ನನ್ನನ್ನೆ…ಆದರೇ ನನ್ನನ್ನಲ್ಲ

ಅವನ ಬಲವಂತದ ಜೋಕಿಗೂ
ಇಷ್ಟ ಪಟ್ಟು ನಕ್ಕಿದ್ದೀನಿ..
ತುಂಬಾ ದುಃಖದಲ್ಲಿದ್ದೀನಿ
ಒಂಚೂರು ನಗಬೇಕು ಅಂದ್ರೂ
ನಗುವಿನ ತಿಜೋರಿಯ ಕೀಲಿ
ಕೈ ಅವನ ಬಳಿಯಿದೆಲ್ಲ?

ಹೆಸರಿಡಿದೂ ಕೂಗಿದರೆ ಸಾಕು
ಹೆಗಲಲ್ಲಿ ಜೋಕಾಲಿಯಾಡುತ್ತಿದ್ದ
ಮತ್ತೆ ಕೆನ್ನೆ ತುಟಿಗೆಲ್ಲ ಓಕುಳಿಯಿಡುತಿದ್ದ
ಅಸಾಮಿ, ತುಂಬಾ ದಿನದಿಂದ ಪತ್ತೆ ಇಲ್ಲ
ಹೃದಯ ತೆಗೆದುಕೊಂಡಿದ್ದೆ
ಅವನ ವಿಳಾಸ ಮರೆತಿದ್ದೀನಿ.

ಹೀಗೆ ಹೋಗಿ ಹಾಗೆ
ಬಂದುಬಿಡುವೇ ಅಂದು
ಹೋದವನು ಸುಮ್ಮನೇ ಹೋಗಿಲ್ಲ.
“ಎನೋ” ತೆಗೆದುಕೊಂಡು ಹೋಗಿದ್ದಾನೆ.
ಮನೆಯ ನಾಯಿಮರಿಗೆ
ಗಂಜಿಕುಡಿಸುವ ಮಡಿಕೆಯ
ಹತ್ತಿರದ ಜಾಗ ನನಗೆ ಹಿತವೆನ್ನಿಸುತ್ತೆ
ಕಣ್ಣುಗಳಲ್ಲಿ ಶಬರಿಯನ್ನ
ತುಂಬಿಕೊಂಡು ಕುಳಿತಿದ್ದೀನಿ.

ಪೋಲಿ ಹುಡುಗ

6 ಆಕ್ಟೋ

ಮಡಿಲಲ್ಲಿ ಮಲಗಿಸಿಕೊಂಡು
ಒಂದು ಕತೆ ಹೇಳು ಅಂದ
ಹುಡುಗಿಗೆ..ಒಂದು ಪ್ಲಸ್ ಒಂದು
ಮೂರು ಅಂದು ನಸುನಗುತ್ತಾನೆ.

ತನ್ನ ಮನೆಯ ಗೋಡೆಗೆ
ನೇತು ಹಾಕಿದ್ದ ಮುಕ್ಕೋಟಿ
ದೇವರುಗಳ ಚಿತ್ರಗಳು ಹರಿದು
ಮಣ್ಣುಮುಕ್ಕುತ್ತಿದ್ದರೇ..
ತನ್ನ ಕೋಣೆಯ ಮಬ್ಬುಗತ್ತಲಲ್ಲಿ
ಕಣ್ಣುಕುಕ್ಕುವ ಮೂರು ಕಾಸಿನ
ನೀಲಿಚಿತ್ರಗಳ ಮುಂದೆ ನಿಂತು
ಮೂರು ಸೇರು ಜೊಲ್ಲು ಸುರಿಸುತ್ತಾನೆ

ಬೈಕಿನ ಹಿಂದೆ ಕುಳಿತ ಗೆಳತಿ
ಇವನನ್ನ ತಬ್ಬಿ ಹಿಡಿಯುವ
ಬಗ್ಗೆ ಯೋಚಿಸುತಿದ್ದರೇ,
ಅವನಾಗಲೇ ರೋಡಲ್ಲಿ ಬರುವ
ಹಂಪಿಗಾಗಿ ಚಡಪಡಿಸುತ್ತಾನೆ.

ಕರೆಂಟು ಹೋಗಿ
ಘಂಟೆಯಾದರೂ
ಮನೆಯಲ್ಲಿ ಬೆಳಕಿರಲಿಲ್ಲ.
ಇವಳು ಹಚ್ಚಿಟ್ಟ ಪ್ರತಿ
ಹಣತೆಯ ಮೇಲೂ
ಪ್ರತಿ ದಾಳಿಯಿಟ್ಟು
ಕತ್ತಲು ಬೇಡುತ್ತಾನೆ.

ಇವಳು ಕೆಮ್ಮಿದರೂ
ಸಾಕು ಮಾತ್ರೆಯ ಬದಲಿಗೆ
ಅಮೃತಾಂಜನದ
ಡಬ್ಬಿ ಹಿಡಿದುಕೊಂಡು
ಅಡಿಯಿಂದ ಮುಡಿಯವರೆಗೆ
ಮಸಾಜು ಮಾಡಬೇಕು ಅನ್ನುತ್ತಾನೆ