Archive | ಹನಿ RSS feed for this section

ಹೆಸರಿನ ಹಂಗಿಲ್ಲದ ಹನಿಗಳು

30 ಡಿಸೆ

ಕವಿತೆಯ ಕೊನೆಯ
ಸಾಲಿನ ಬಳಿಕ,
ಸಂಜೆ ಕತ್ತಲಿನ ಕೊನೆಗೆ
ಮಾತುಗಳೆಲ್ಲ ಮುಗಿದ ನಂತರ
ಎಲ್ಲರ ಹಾರೈಕೆಗಳೂ ತೀರಿದ ತಕ್ಷಣ
ನೆನಪಾಗು.. ಬದುಕು ಮುಂದುವರಿಯಬೇಕು.
———————————————
ಮುಳುಗಲಿ ಜಗತ್ತು
ತೊಲಗಿ ಹೋಗಲಿ ಬೆಳಕು
ಆರಲಿ ಬಿಡು ದೀಪ
ನಾಶವಾಗಿ ಹೋಗಲಿ ಸುಖ ಸಂತೋಷ
ನಾನು ನಿನ್ನ ಮಡಿಲಲ್ಲಿರುವೆ.
——————————————————
ಅಲ್ಲಿ ಹರಿದ ತಾಯ ಸೆರಗಿತ್ತು
ಅಲ್ಲಿ ಅವಳ ಬಿರಿದ ಎದೆಯ
ಸುಂದರ ಬೆರಗಿತ್ತು.
ಹುಡುಗ ತಾಯ ಸೆರಗ ಹೊಲೆದುಕೊಟ್ಟ.
——————————————————–
ಅವನಿಗೆ ಕಾಯುತ್ತಿದ್ದ ಅವಳ
ನೆತ್ತಿಯ ಮೇಲೆ ದಶಕಗಳೆ
ಉರುಳಿ ತೆರಳಿ ಹೋಗಿದ್ದರೂ,
ಅವಳ ಎದೆಯ ಒಳಗೆ ಈಗಲೂ
ಅವನ ಪ್ರೀತಿಯ ಎರಡು ಸಾಲಿನ
ಕವಿತೆಳು ಜೀವ ತಳೆಯುತ್ತಲೇ ಇವೆ.
———————————————————-
ಜಗತ್ತು ಅವಳನ್ನು
ಹುಡುಕುತ್ತಿತ್ತು.
ಯಾರ ಕಣ್ಣಿಗೂ ಬೀಳದೆ
ಕವಿತೆಯೊಳಗಡಗಿ ಕುಳಿತಿದ್ದಳು
ನನ್ನಿಂದ ತಪ್ಪಿಸಿಕೊಳ್ಳಲಾಗಲಿಲ್ಲ.
——————————————————–
ಹಸಿವಿನಿಂದ ಹೊರಗೆ
ಕತ್ತಲಲ್ಲಿ ಮಲಗಿದ್ದ ಕೋಟ್ಯಾಂತರ
ಜನರ ಮೇಲೆ ಬೆಳದಿಂಗಳ ಸುರಿಸಿದ
ಚಂದಿರ, ಅವರ ಹಸಿವ ನೀಗಿಸಲಾರದ
ಅಸಾಹಾಯಕತೆಗೆ ಹನಿಗೂಡಿದ್ದಾನೆ.
————————————————————-
ಅವಳ ಕೈ ಹಿಡಿದುಕೊಂಡ
ಅವನ ಸಮಸ್ತ ಖುಷಿಗಿಂತ
ಹಿಡಿದ ಹಿಡಿತ ಸಡಿಲಾಗಬಾರದು
ದೇವರೆ ಎಂದು ಬೇಡಿಕೊಂಡ
ಪರಿ ದೊಡ್ಡದಿದೆ.
—————————————————————
ಪ್ರಪಂಚದ ಅತ್ಯುತ್ತಮ
ಚಿತ್ರಕಾರರೆಲ್ಲರೂ ಚಿತ್ರಿಸಿದ
ಚಿತ್ರಿಕೆಗಳೆಲ್ಲವೂ,
ನನ್ನ ಕಪ್ಪು ಬಿಳುಪು ಸುಂದರಿಯ ಹಳೆಯ
ಫೋಟೋದ ಮುಂದೆ ತಲೆ ತಗ್ಗಿಸಿವೆ.
————————————————————
ಹತ್ತು ಮಮತೆ,
ನೂರು ನಂಬಿಕೆ,
ಸಾವಿರ ಪ್ರಾಮಾಣಿಕತೆ,
ಸಾವಿರಾರು ಪ್ರೀತಿ ಪ್ರೇಮಗಳ
ಜೊತೆ ನನ್ನವನನ್ನ ತೂಗಿದ
ತಕ್ಕಡಿಯ ಭಾಗ
ಯಾವತ್ತೂ ಕೆಳಗೇ ಇರುತ್ತದೆ
————————————————————-
ನಾನು ಕೇಳಿದ ಅಷ್ಟೂ
ಪ್ರಶ್ನೆಗಳಲ್ಲಿ ಒಂದಕ್ಕೂ ಉತ್ತರಿಸದ
ನಿನ್ನ ಪ್ರಮಾದಕ್ಕೆ ಒಂದು ಮುತ್ತನ್ನು
ಕೊಡಬೇಕೆಂಬ ಕಠಿಣ ಸಜೆಯನ್ನ ವಿಧಿಸುತ್ತಿದ್ದೇನೆ.

( ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)

ಹಾಯ್ಕುಗಳು !

7 ಮಾರ್ಚ್

ಅವನ ಮೇಲಿನ
ಒಂದು ದಿನದ ಹಂಬಲದ
ಮುಂದೆ ಶಬರಿಯ ವರ್ಷದ
ದಾಖಲೆಗಳೆಲ್ಲ ಚಿಂದಿಯಾದವು !
———————
ನಿನ್ನೆ ಮದ್ಯದ ಹನಿಯ
ಜೊತೆ ಸಿಗರೇಟಿನ
ಘಾಟು ಜೊತೆಯಾಗಿದ್ದಾಗ
ನೀನು ನೆನಪಾಗಲಿಲ್ಲ..
ಹಾಗಾದರೆ ಯಾರು ಪವಿತ್ರ !
———————

ನೋವನ್ನು
ಆಚರಿಸುತ್ತಿದ್ದೇನೆ !
ನಿನ್ನ ಸಹಾಯಕ್ಕೆ
ಧಿಕ್ಕಾರ ಹಾಗೂ
ಧನ್ಯವಾದಗಳು
———————
ಈಗೀಗ ಮಗ್ಗಲು
ಬದಲಿಸಲೂ ಭಯ !

ಪಕ್ಕದಲ್ಲಿ ನೀನಿಲ್ಲದಿದ್ದರೆ ?
———————

ನಿನ್ನ ಹೆಸರು
ಬರೆದ ಪೆನ್ನಿನ ತುದಿಯನ್ನ
ಅಕ್ಕಸಾಲಿಗ
ಕೊಂಡೊಯ್ದಿದ್ದಾನೆ !
———————

ಎಂತಹ ಅದೃಷ್ಟಶಾಲಿ !
ಕೊನೆಯ ಪಕ್ಷ
ನಿನ್ನ ನೆನಪಾದರೂ
ಜೊತೆಗಿದೆ
———————

( ಹಾಯ್-ಬೆಂಗಳೂರು ಪತ್ರಿಕೆಯಲ್ಲಿ ಪ್ರಕಟಿತ)

ಒಂದೆರೆಡು ಹನಿ !

11 ಫೆಬ್ರ

ಸತ್ತ ಬೇರು
ಚಿಗುರಿಬಿಟ್ಟಿದೆ !
ನೀನೆ ಬೇಡಿಕೊಂಡಿರಬೇಕು!
ಇಲ್ಲಾ ಮರದ ಮರೆಗೆ ನಿಂತು
ಹಾಡಿರಬೇಕು !

ನೀನು ನಿನ್ನೆ
ಹಾಡಿದ ಹಾಡಿಗೆ
ತೂಕ ಬಂದುಬಿಟ್ಟಿದೆ !

ನನ್ನ ಜೊತೆ
ಅವನಿಲ್ಲವಾದ ದಿನ
ಜಗತ್ತಿನ ಸಮಸ್ತ
ದೇವರುಗಳಿಗೆ ಒಂದಿಷ್ಟು
ಶಾಪಗಳು ಹೆಗಲೇರಲಿವೆ !

ಇಲ್ಲಿ ಒಂದು ಪಂದ್ಯ,
ತಾಕತ್ತಿದ್ದರೆ ಸಮಸ್ತ
ಸಾಗರಗಳು ಈ ಎದೆಯ
ಒಲವನ್ನ ತುಂಬಿಸಿಕೊಳ್ಳಲಿ

ಒಂದು ದಿನ
ನಿನ್ನೊಂದಿಗೆ
ಮಾತನಾಡಲಿಲ್ಲ!
ಜೀವನಪೂರ್ತಿ
ನಿನ್ನ ಜೊತೆಗಿರುವ
ಶಿಕ್ಷೆ ವಿಧಿಸಿಬಿಡು !

(ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)

ಹೆಸರಿನ ಹಂಗಿಲ್ಲದ ಹನಿಗಳು

13 ಆಕ್ಟೋ

ತಾನು ಬರೆಯುವ
ಕವಿತೆಗೆ ಅವಳ
ನೆನಪ ಸಾಲ ಕೇಳಿದ…
ಹುಡುಗಿ ಇಲ್ಲವೆಂದಳು !
ಹುಡುಗ ಅದ್ಭುತ ವಿರಹಗೀತೆ
ಬರೆದು ಸೇಡು ತೀರಿಸಿಕೊಂಡ.!
——————–

ಒಂದು ಕ್ವಿಂಟಾಲ್
ಚಳಿ ಇದೆ.
ಒಂದು ಮುಟಿಕೆಯಷ್ಟು
ನಿನ್ನ ನೆನಪು ಕಳಿಸು.
—————-

ಕಣ್ಣುಗಳು ಒಲವ
ದಾರಿಯ ಮರೆತವು..
ಹೃದಯಕ್ಕೆ ಪ್ರೀತಿಯ
ಬಂಜೆತನ ಅಂಟಿತು.
—————

ಒಂದು ಹಾಡುಬರೆಯಬೇಕು
ಒಂದು ಸಾಲು ನೆನಪಾಗುತ್ತಿಲ್ಲ
ನಿನ್ನದೂ ಅಂತ ಒಂದಕ್ಷರವೂ
ನನ್ನ ಬಳಿಯಿಲ್ಲ..
——————-

ಸಂಜೆ ಸಿಗು..
ರಾತ್ರಿ ಬೆವರಿಳಿಸಿದ
ಕೆಲವು ಬಯಕೆಗಳಿಗೆ
ಉತ್ತರಿಸುತ್ತೇನೆಂದು
ಮಾತು ಕೊಟ್ಟಿದ್ದೇನೆ.
——————-

ಹೆಸರಿನ ಹಂಗಿಲ್ಲದ “ಹನಿಗಳು”

17 ಸೆಪ್ಟೆಂ

 

  ನೀನಿಲ್ಲದೇ ಸತ್ತೇ ಹೋಗ್ತೀನಿ

 ಅಂದವನನ್ನೊಮ್ಮೆ ಕೆಕ್ಕರಿಸಿಕೊಂಡು

 ನೋಡಿದಳು…..ಹುಡುಗ ಅರ್ದ ಸತ್ತಿದ್ದ.

——————————-

 ಅವಳ ಹಂಗಿಲ್ಲದೆ

 ಕವಿತೆ ಬರೆಯ ಹೊರಟವನು

 ಕವಿತೆಯಿರಲಿ – 

 ಕವಿತೆಗೊಂದು 

 ಹೆಸರೂ ತೋಚದೆ ಬೆತ್ತಲಾಗಿದ್ದಾನೆ

——————————-

 

ಪ್ರೀತಿ ಮಾಡಿದ ಹುಡುಗನಿಗೇನು

ಸಿಕ್ಕಿತೋ ಗೊತ್ತಿಲ್ಲ..ಜಗತ್ತಿಗೆ

ಒಬ್ಬ ತತ್ವಜ್ನಾನಿ ಉದಯಿಸಿದ್ದ.

————————-

ಹೋಗಿ ಬರುತ್ತೇನೆಂದ

ಹುಡುಗನ ಮಾತಿಗೆ ವರ್ಷಗಳೇ

ಉರುಳಿದವು..ನಂಬಿ ಕುಳಿತ

ಗೆಳತಿಗೆ ಸಮಸ್ತ ದೇವತೆಗಳು

ಕೂಡ ಸುಳ್ಳು ಹೇಳಿದವು..

————————–

ಮತ್ತೆ ಮತ್ತೆ ಹುಡುಗಿ

ಹೂವಿನ ತೋಟದಲ್ಲಿ

ಸುತ್ತಿದ್ದಕ್ಕೆ ಹೂಗಳು

ನಾಚಿ ತಲೆತಗ್ಗಿಸಿ ಮರೆಯಾದವು..

ಜನರು ಹೂವಿನ ಗಿಡಗಳ

ಬಂಜೆತನಕ್ಕೆ ಶಪಿಸಿದರು..

——————————

ಹೀರೊ ಹುಡುಗಿಯನ್ನ

ಹಾರಿಸಿಕೊಂಡು ಹೋಗಿ ಮದುವೆಯಾದ

ಜನರು ಚಪ್ಪಾಳೆ ತಟ್ಟಿದರು..

ಮಗಳು ಯಾರನ್ನೋ ಇಷ್ಟವೆಂದಳು

ಒಂದು ಕೋಣೆಯಲ್ಲಿ ಕೂಡಿಟ್ಟು

ಬಾಗಿಲು ಹಾಕಿದರು

—————————–

ಹನಿ – ಹನಿ

25 ಆಗಸ್ಟ್

ಚಳಿ….

 

ನೀನು ನನ್ನ

ಜೊತೆಗಿರುವುದಾದರೆ

ನಾನು ಬೇಸಿಗೆ ಕಾಲದಲ್ಲೂ

ನನ್ನ ಎದೆಯ ಗೂಡಿಗೆ

ಆಹ್ವಾನಿಸುವ ಪ್ರೀತಿಯ ಅತಿಥಿ.

 

ಚುಕ್ಕಿ….

 

ನಿನ್ನ ಒಲವ ಬೀದಿಯೊಳಗೆ

ನನ್ನ ಪ್ರೀತಿಯ ತೇರ .

ಎಳೆಯಲಾಗದೇ ಬಿಕ್ಕಳಿಸುತ್ತಾ

ನಿನ್ನ ನೆನೆಯುತ್ತ

ನಾನು ನಿನಗಿಟ್ಟ ಹೆಸರು.

 

ಒಲವು…

ನಿನಗೆ ಅರ್ಥವಾಗದೇ

ಉಳಿದಿದ್ದು

ನನಗರ್ಥವಾಗಿಯೂ ನೀನು

ಅಳಿಸಿದ್ದು

ನನ್ನ ಎಲ್ಲಾ ನೋಟದಲ್ಲಿದ್ದಂತೆ

ನಿನ್ನೆಲ್ಲ ತಿರಸ್ಕಾರದಲ್ಲಿ ಕೂಡ.

 

ಮೌನ….

ಕಣ್ಣೀರಾಗಿ ಎಲ್ಲಾ

ಭಾರವನ್ನ ಹೊರಹಾಕುವುದಕ್ಕಿಂತ

ಸುಮ್ಮನೆ ಬಿಕ್ಕಳಿಸುತ್ತ

ಜನ್ಮಪೂರ್ತಿ ನಿನ್ನ ನೆನಪಿಡುವ

ಈ ಹೃದಯದ ಆರ್ತನಾದ..

 

ಧನ್ಯತೆ…

 

ಒಂದು ಸಾರಿ ನಿನ್ನ

ಹೆಸರಿಡಿದು ಕೂಗ್ತೀನಿ ಅಲ್ವ,

ಆ ಕ್ಷಣದಲ್ಲಿ ಈ ಎದೆಯ

ಗೂಡಿನಲ್ಲಿ ಅದ್ಭವಿಸುವ

ಪ್ರೀತಿಯ ದೇವರ ಮೂರ್ತಿ.

 

ಹೆಸರಿನ ಹಂಗಿಲ್ಲದ ಹನಿಗಳು

4 ಆಗಸ್ಟ್

ರಾತ್ರಿಯೆಲ್ಲ ನನಗೆ
ನಿದ್ರೇನೆ ಬರಲ್ಲಪ್ಪ
ಮೊದಲು ಆ ದಿಂಬಿಗಿಟ್ಟ
ನಿನ್ನ ಹೆಸರನ್ನ ಬದಲಿಸಬೇಕಾಗಿದೆ

ನಂಗೆ ಯಾರಿಗಾದ್ರು ಕೆಟ್ಟದಾಗಿ
ಬಯ್ಯಬೇಕು ಅನ್ನಿಸಿದ್ರೆ ಸೀದ
ದೇವರ ಹತ್ರ ಹೋಗಿ “ನೀನು
ಈಡಿಯಟ್” ಅಂದು ಬಿಡ್ತೀನಿ.!
ನೀನೆ ಹೇಳು, ಇಲ್ಲಿ ನಿಂಗು ನಂಗು
ಕೇವಲ ಏಳು ಜನ್ಮ ಅಂತ
ಕಾನೂನು ಮಾಡಿದ್ದು ಇವನ ತಪ್ಪಲ್ಲವ

ದೇವರು ಅನ್ನುವ ಪುಣ್ಯಾತ್ಮ
ನನಗೆ ಮೂರು ವರ ಕೊಟ್ರೆ
ಮೊದಲೆರೆಡು ವರವನ್ನ ನಿಂಗೆ
ಒಳ್ಳೆಯದು ಮಾಡಪ್ಪಾ ಅಂತ
ಕೇಳ್ಕೋತೀನಿ..ಮತ್ತೊಂದು ವರನ
ನಿನಗೆ ತುಂಬಾ ತುಂಬ ಒಳ್ಳೆಯದು
ಮಾಡು ಅಂತ ಬೇಡ್ಕೋತೀನಿ

ನನಗೊಂದು ಪುಟಾಣಿ
ಕನಸಿದೆ ಗೊತ್ತ? ದೇವರಿಗೆ
ಕೋಟಿ ಸುಳ್ಳುಗಳನ್ನಾದರೂ
ಹೇಳಿ ನಿನ್ನ ಪಡಿಬೇಕು ಅನ್ನೋದು

ಹೆಸರಿನ ಹಂಗಿಲ್ಲದ ಹನಿಗಳು

4 ಆಗಸ್ಟ್

ನಾನು ನಿನಗೆ ಒಂದು
ಕತೆ ಹೇಳ್ತ ಹೋಗ್ತೀನಿ
ನೀನು ಹೂ..ಹೂ..ಅನ್ನುವ
ಬದಲಿಗೆ ಒಂದೊಂದು ಮುತ್ತು
ಕೊಡುತ್ತ ಹೋಗು ಒಪ್ಪಿಗೆಯ?
ನನಗೊಪ್ಪಿಗೆಯಿದೆ

ದೇವರು ನಿನಗೆ ಒಂದು
ಖಾಲಿ ಪುಸ್ತಕ ಕೊಟ್ಟರೆ
ಅದರಲ್ಲಿ ನನಗೊಂದು ಹಾಳೆ
ಕೊಡ್ತೀಯ? ಅದರಲ್ಲಿ ನಿನ್ನ
ಬಂಗಾರದ ಹೆಸರ ಬರೆದು
ಈ ಹೆಸರಿನವರನ್ನ ನನಗೆ ಕೊಡು
ಅಂತ ದೇವರಿಗೆ ಪೋಸ್ಟ್ ಮಾಡ್ತೀನಿ

ಅಳು ಅಂದ್ರೆ ಏನು ಅಂತ
ನನಗೆ ಗೊತ್ತಿರಲಿಲ್ಲಪ್ಪ
ನಿನ್ನ ಪರಿಚಯವಾದ ನಂತರನೇ
ಅದರ ಮಹತ್ವ ಗೊತ್ತಾಗ್ತೀರೋದು
ಸರಿ ಈಗಲಾದ್ರು ಸ್ವಲ್ಪ ನಗ್ತೀಯ?

ಏನು? ನನಗೆ ಬೇಜಾರ್
ಆದ್ರೆ ನೀನು ಬಿಕ್ಕಳಿಸುತ್ತೀಯ?
ನಾನು ಬಿಕ್ಕಳಿಸಿದ್ರೆ ನೀನು ಅಳ್ತೀಯ?
ಒಂದು ವಿಷ್ಯ ಗೊತ್ತ? ನೀನು
ಅತ್ರೆ ನಾನು ಸತ್ತೇ ಹೋಗ್ತೀನಿ

ಹನಿ-ಹನಿ

30 ಜುಲೈ

ದೇವರು
———————–
ಕೇವಲ ಒಂದೇ ಒಂದು
ಜನುಮದಲ್ಲಾದರೂ ನಾನು
ನಿನ್ನ ಜೊತೆ ಬದುಕಿ ಬಾಳಬೇಕು
ಅನ್ನುವ ನನ್ನ ಮುಗ್ಧ ಬೇಡಿಕೆಗೂ
ಅಸ್ತು ಅನ್ನದ ಒಬ್ಬ ಜೋಕರ್.

ಪ್ರಶ್ನೆ
———————–
ನಿನ್ನಿಂದ ಮನದ ಸರೋವರ
ರಾಡಿಯಾಗಿದ್ದಕ್ಕೆ ಬೇಸರವಿಲ್ಲ
ಮತ್ತದೇ ಹಳೆಯ ನೀರ ತುಂಬಿಸಲು
ನಾನೆಷ್ಟು ನೀರು ಸುರಿಸಬೇಕು
ಸ್ವಲ್ಪ ಹೇಳ್ತೀಯಾ?

ಸುಳ್ಳು
———————–
ನನ್ನಲ್ಲಿರುವ ಸಾವಿರ
ನೋವಿನ ಕವನಗಳಿಗೂ
ಮತ್ತೆ ಸಾವಿರಾರು ಕಣ್ಣೀರ
ಕಥೆಗಳಿಗೆ ನೀನೆ ಕಾರಣವಾದರೂ
“ಛೇ” ನೀನಲ್ಲವೆಂದು ಈ ಹೃದಯ
ಸುಳ್ಳೇ ಸಮಧಾನ ಮಾಡುವ ಕಲೆ

ಬಯಕೆ
———————–
ಈ ಮಳೆಗಾಲದಲ್ಲಿ
ಮಳೆಯ ಹನಿಯ ಜೊತೆ
ನನ್ನ ಕೆಲವೇ ಕೆಲವು ಬೆಚ್ಚನೆಯ
ಬಯಕೆಗಳೂ ಬೆರೆತು ಅವಳಲ್ಲಿ
ಸುರಿದು ಅವಳು ನಾಚಿ ಕೆಂಪಾಗಿ
ನಾನು ನೆನಪಾಗಿ ಹಬ್ಬವಾಗಬಾರದ.?
———————–

ನಿರಪರಾದಿಗಳು
———————–
ನಿನ್ನೆದೆಯಲ್ಲಿ ಜಾಗ
ಕೇಳಿದ್ದು ನಾನು,
ಇಲ್ಲವೆಂದಿದ್ದು ನೀನು,
ನೊಂದಿದ್ದು ಮಾತ್ರ ಹೃದಯ,
ಆದರೆ ಬೋರ್ಗರೆದು ಅತ್ತಿದ್ದು
ಮಾತ್ರ ಈ ಕಣ್ಣುಗಳು.

ಹನಿ-ಹನಿ

23 ಜೂನ್

ಸತ್ಯ
———————–
ಚುಕ್ಕಿಯಿಲ್ಲದೆ ನೀನಿಟ್ಟ
ನನ್ನ ಹೆಸರಿನ ರಂಗೋಲಿಯ
ಆಯುಷ್ಯದ ಬಗ್ಗೆ ನಂಬಿಕೆಯಿಲ್ಲ-
ನಿನ್ನ ಕುರಿತು ಈ ಎದೆಯ ಮೇಲೆ
ಬರೆದುಕೊಂಡ ಭರಪೂರ
ಭಾವನೆಗಳಲ್ಲಿ ಬರವಸೆಯಿದೆ

ಸಲಹೆ
———————–
ಪ್ರತಿ ಸಲ ಬೇಡ
ಅಂತಹ ದುರಾಸೆಯಿಲ್ಲ ನನಗೆ.!
ದಿನಕ್ಕೊಂದು ಸಲ ನನ್ನ ಕನಸಿಗೆ ಬಂದು
ಮತ್ತೆ ನಾಳೆ ಬರ್ತೀನಿ ಅನ್ನೊ
ಬರವಸೆ ಕೊಟ್ಟು ಹೋಗಿ ಬಿಡು

ಕಾಮ
———————–
ನಮ್ಮ ಗೆಳೆಯ ಗೆಳತಿಯರ
ಪ್ರೇಮದೂರಿನಾಚೆ ಇರುವ
ಕಾಡೊಳಗೆ ಅವಿತು
ಕುಳಿತಿರುವ ಒಂದು ಚಿರತೆ.

ಗೆಳೆಯ
———————–
ನಾನು ಜೊತೆಯಲ್ಲಿರುವಾಗಲೆಲ್ಲ
ಇವನ ಕಣ್ಣಿಗೆ ಕಸ ಬೀಳುತ್ತೆ,
ಅರ್ದ ತಿಂದ ಹಣ್ಣಿನ ಮೇಲೂ
ಇವನ ಕಣ್ಣು ಬೀಳುತ್ತೆ,
ಮಜಭೂತಾದ ಮಾರ್ಚ್ ತಿಂಗಳಲ್ಲೂ
ಇವನಿಗೆ ಚಳಿಗಾಳಿ ಬೀಸುತ್ತೆ.

ಕೋರಿಕೆ
———————–
ಪ್ರತಿ ಕಾಮನ ಬಿಲ್ಲಿಗೂ ಇವಳ
ಹೆಸರಿಡುತ್ತೇನೆ, ಹೆಸರಿಡಿದು
ಕೂಗುವಷ್ಟರಲ್ಲಿಯೆ ಮಾಯವಾಗುತ್ತಾಳೆ
ದೇವರಲ್ಲಿ ಯಾವತ್ತು ನನಗೆ
ಕಾಮನಬಿಲ್ಲು ಕಾಣಿಸದಂತೆ ಶಾಪ ಕೊಡು
ಅಂತ ಕೇಳಿಕೊಳ್ಳಬೇಕು !