ಹಾಯ್ ಬಂಗಾರ, ನನ್ನ ಹೃದಯದ ಅರಸಿ,ನಾನಿಲ್ಲಿ ಚಕ್ರವಾಕ ಪಕ್ಷಿತರ ನಮ್ಮೂರ ಕಲ್ಯಾಣಿ ಹತ್ರ ನೀನೊಬ್ಳೆ ಬರ್ತೀಯ ಅಂತ ಕಾಯ್ತ ಇದ್ರೆ ನೀನ್ ಮಾತ್ರ ನಿಮ್ “ಚಿಕ್ಕಮ್ಮ” ಹೆಳವನಕಟ್ಟೆ ಗಿರಿಯಮ್ಮ ಜೊತೆ ಬರೋದ? ಒಳ್ಳೆ ಮನೆತನದಿಂದ ಬಂದ ಹುಡುಗ ಕಣಮ್ಮ ನಾನು, ಅವರೆಲ್ಲಾದ್ರು ನನ್ನನ್ನ ನೋಡಿದ್ರೆ ನಮ್ಮ ಸಂಬಂಧ ಮೊದ್ಲಿನ್‌ತರ ಉಳಿತಾ ಇತ್ತಾ ಹೇಳು? ಪ್ಲೀಸ್ ಈ ಹೃದಯಸಾಕ್ಷಿಯಾಗಿ ಪ್ರೀತಿಯಿಂದ ಹೇಳ್ತಾ ಇದ್ದೀನಿ, ನನ್ನ ನಾಳೆಯ ಬದುಕು ಅನ್ನುವ ಪುಸ್ತಕದಲ್ಲಿ ನಿನ್ನ ಪ್ರೀತಿಯ ಜೋಗುಳ ಇರಲೇಬೇಕು, ನೀನಡೆವ ಹಾದಿಯಲ್ಲಿ ಒಲುಮೆಗೀತೆ ಹಾಡ್ತ ನಿನ್ನ ಹೆಜ್ಜೆಗಳಿಗೆ ನಾನು ಬೆಳಕು ತರ್ತೀನಿ.
ನೀನು ನನ್ನ ಜೊತೆ ಇಲ್ಲದ ದಿನಕ್ಕೆ ಗ್ರಹಣ ಹಿಡಿದ ಹಾಗಾಗುತ್ತೆ, ಇಲ್ಲಿರುವುದು ಸುಮ್ಮನೆ ಅನ್ನುವ ಸತ್ಯ ಅನಾವರಣವಾಗುತ್ತೆ, ಪ್ರತಿ ದಿನ ನೀನು ನನ್ನ ಜೀವನದಲಿ ಯಾವತ್ತೂ ಅಳಿಸಲಾಗದಂತಹ ಪ್ರೀತಿಯ ರಂಗೋಲಿ ಬಿಡಿಸುತ್ತಿರಬೇಕು ಚಿನ್ನ, ಆದ್ರೆ ಯಾಕ್ ನೀನು ನನ್ನ ಪಾಲಿನ ಗುಪ್ತಗಾಮಿನಿಯಾಗಿ ಹರಿತಾ ಇದ್ದೀಯಾ? ನೀನ್ ತಿಳ್ಕೊಂಡ ಹಾಗೆ ಅಂಬಿಕ, ಪಾರ್ವತಿ, ಸಾವಿತ್ರಿ, ಚಿತ್ರಲೇಖ, ಲಕುಮಿ ಇವರೆಲ್ಲರೂ ಜಸ್ಟ್ ನನ್ನ ಕ್ಲಾಸ್‌ಮೇಟ್ಸ್ ಅಷ್ಟೇ ಕಣೆ, ನಾನ್ ಸುಳ್ಳು ಹೇಳ್ತಿಲ್ಲ, ಬೇಕಾದ್ರೆ ಬನಶಂಕರಿ ದೇವಿಯ ಮೇಲೆ ಆಣೆ ಮಾಡ್ತೀನಿ. ನಿನಗೆ ಹೇಳದೇ ಇಲ್ಲಿಯವರೆಗೂ ನಾನ್ ಮಾಡಿದ ಒಂದೇ ಒಂದು ತಪ್ಪು ಅಂದ್ರೆ ಪಕ್ಕದ ಮನೆ ಸುಂದ್ರಿ ಸೀತೆಜೊತೆ ಅರುಂಧತಿ ಸಿನಿಮಾದ ಸೆಕೆಂಡ್ ಷೋಗೆ ಹೋಗಿದ್ದು.ನಮ್ಮಿಬ್ಬರ ಬಗ್ಗೆ ನಿನಗೇನಾದ್ರು ಸಣ್ಣ ಅನುಮಾನ ಇದ್ಯಾ? ಸರಿ ಇನ್ ಮೇಲೆ ನಾನು ಅವಳು ಅಣ್ಣತಂಗಿ ಸರಿನಾ?ನಂಬಿಕೆ ಬಂತಾ?ಈಗ್ಲಾದ್ರೂ ಸ್ವಲ್ಪ ನಗು ಮರಾಯ್ತಿ, ನನ್ ಮನಸ್ಸಿಗೂ ಸ್ವಲ್ಪ ತಂಗಾಳಿ ಬೀಸಿದ ಹಾಗಾಗ್ಲಿ.
ನನ್ನ ನೋವುಗಳಿಗೆ ಕಾರಣ ಯಾರೇ ಇರಲಿ ಕಣೆ, ಆದ್ರೆ ನನ್ನ ನಲಿವುಗಳಿಗೆ ಪ್ರೇರಣ ಶಕ್ತಿ ಎಲ್ಲ ನೀನೆ.ನಿನ್ನ ಪರಿಚಯವಾಗಿ ಕೇವಲ ನೂರು ದಿನಗಳು ಅಷ್ಟೆ, ಈಗಾಗ್ಲೆ ಸಾವಿರ ಸಾವಿರ ಜನ್ಮದ ಪ್ರೀತಿ ಹೇಳುವ ಆಸೆ ನನಗಾಗ್ತಿದೆ, ಇದು ಯಾವಜನ್ಮದ ಮೈತ್ರಿಕಣೋ? ನೀನು ನನ್ನ ಮೇಲೆ ಮಾಡಿರುವ ಎಲ್ಲ ಆಪಾದನೆಗಳಿಂದಲೂ ಒಂದಲ್ಲ ಒಂದು ದಿನ ಮುಕ್ತನಾಗೇ ಆಗ್ತೀನಿ, ನಿನ್ನ ಪ್ರೀತಿ ಇಲ್ಲದ ಮೇಲೆ ನಾನು ಏನಾಗ್ತೀನೋ ಅನ್ನೋ ಭಯ ಶುರುವಾಗ್ತಿದೆ, ಪ್ಲೀಸ್ ನನ್ನ ಬಿಟ್ಟು ಹೋಗ್ಬೇಡ, ನಿನ್ನಿಷ್ಟದಂತೆ ಯಂಡಮೂರಿ ಅವರ ಕನ್ನಡ ಅನುವಾದ ಪುಸ್ತಕಗಳನ್ನ ನಿನಗೆ ತಂದುಕೊಡ್ತೀನಿ, ನಿನ್ನಿಷ್ಟದ ಗೆಜ್ಜೆಪೂಜೆ: ಸಿನಿಮಾ ಕರ್ನಾಟಕದ ಯಾವ ಟೆಂಟಲ್ಲಿದ್ರೂ ನಿನ್ನ ಕರೆದುಕೊಂಡು ಹೋಗಿ ತೋರಿಸ್ತೀನಿ, ನೀನು ಪ್ರೀತಿಸುವ ಸೂರ್ಯಕಾಂತಿ ಹೂವನ್ನ ತಂದು ನಿನ್ನ ಮುಡಿಗೆ ಮುಡಿಸ್ತೀನಿ.
ನೀನೊಂತರ ಪುಣ್ಯಕೋಟಿಯ ಹಾಗೆ ಬೆಂಕಿಯಲ್ಲಿ ಅರಳಿದ ಹೂವು ಕಣೆ.ಯಾರು ಬೇಕಾದ್ರೂ ನಿನಗೆ ಮೋಸ ಮಾಡ್ಬೋದು ಸ್ವಲ್ಪ ಹುಷಾರಾಗಿರು. ಪಕ್ಕದ ಮನೆ ಪಾಂಡುರಂಗವಿಠಲ ಅಂಕಲ್, ಸಂಕ್ರಾತಿ ಬಾರ್ ಅಂಡ್ ರೆಸ್ಟೋರೆಂಟಿನ ಕ್ಯಾಷಿಯರ್ ಪಾಪ ಪಾಂಡು, ನಿನ್ನ ಮುಂದೆ ಪ್ರೀತಿಯ ಗಾಳಿಪಟ ಹಾರಿಸ್ಕೊಂಡು ನಿನ್ನ ಕುತ್ತಿಗೆಗೆ ಮಾಂಗಲ್ಯ ಕಟ್ಟೋಕೆ ರೆಡಿ ಆಗ್ತಿದ್ದಾರೆ,ಆದ್ರೆ ಆ ಬಗವಂತ ನೀವಿಬ್ರು ಪಾರ್ವತಿ ಪರಮೇಶ್ವರರ ಹಾಗೆ ಕೃಷ್ಣ ರುಕ್ಮಿಣಿಯ ಹಾಗೆ ಅಂತ ತೀರ್ಮಾನಿಸಿಯಾಗಿದೆ,ಗೋಧೂಳಿ ಮುಹೂರ್ತದಲ್ಲಿ ಇಬ್ರು ಮದ್ವೆ ಆಗೇ ಬಿಡೋಣ, ನಮ್ಮ ಮನೆ ದೇವತೆಯಾದ ಅಮ್ಮ ನಾಗಮ್ಮನ ಆಶೀರ್ವಾದ ನಮ್ಮ ಮೇಲೆ ಇದ್ದೇಇದೆ, ನೂರು ಕಾಲ ಚನ್ನಾಗಿರಿ ಅಂತ ಹಾರೈಸೋಕೆ ನಮ್ಮ ಗುರುರಾಘವೇಂದ್ರ ಸ್ವಾಮಿಗಳು ಇದ್ದೇ ಇದ್ದಾರೆ, ಪ್ರೀತೀನ ಯಾವತ್ತೂ ಮಾಯಾಮೃಗ ಅಂದ್ಕೊಬಾರದು ಗೆಳತಿ,ಅದೊಂದು ಹೊಸ ಚಿಗುರು ತರ, ಪ್ರಾಮಾಣಿಕತೆಯಿಂದ ಬೆಳಸಿದ್ರೆ ಹೆಮ್ಮರವಾಗುತ್ತೆ, ಅದೇ ಮರದಲ್ಲಿ ನಾನು ನೀನು ಹಾಗು ನಮ್ಮವೆರಡು ಮಕ್ಕಳು ಜೋಕಾಲಿ ಆಡಬಹುದು.
ನಮ್ ಕುಟುಂಬದ ಬಗ್ಗೆ ನೀನ್ ಯೋಚನೆ ಮಾಡೋದೆ ಬೇಡ, ನಿನ್ನ ಪಕ್ಕದಲ್ಲಿ ನಿಲ್ಲಿಸ್ಕೊಂಡು ಅಮ್ಮ ನಿನಗಾಗಿ ಏನ್‌ತಂದಿದ್ದೀನಿ ನೋಡು ಅಂದ್ರೆ ಗೋಕುಲನಿವಾಸದೊಳಗಿಂದ ನಮ್ಮ ತಾಯವ್ವ ಹೊರಗೆ ಬಂದು ನಮ್ಮ ನಮ್ಮ ಮನೆಗೆ ನಮ್ಮ ಮನೆ ಮಗಳು ಬಂದ್ಲು ಅಂತ ನಿನ್ನ ಮನೆ ತುಂಬಿಸಿಕೊಂಡು ಬಾಗಿಲ ಮುಂದೆ ಕಾರ್ತೀಕ ದೀಪ ಹಚ್ಚುತ್ತಾಳೆ. ನಿನಗೆ ಕುಂಕುಮ ಬಾಗ್ಯ ಸಿಕ್ತು ಅಂತ ಕನ್ನಡಿ ನೋಡ್ಕೊಂಡು ನನ್ನ ಮರೆತು ಬಿಡಬೇಡ ಪ್ರೀತಿಯ ಪಾರಿಜಾತವೆ..:)
ನಿನ್ನೊಲುಮೆಯಿಂದಲೇ
ನವಿಲೂರ ಹುಡುಗ
ನವಿಲುಗರಿ ಮೆಚ್ಚಿದವರ(?) ಮಾತು !