Tag Archives: kannada love letter

ನಿನ್ನಂತ ಸ್ಮಾರ್ಟ್ ಫೆಲೋ, ಅಷ್ಟೊಂದು ಸುಂದರಿಯಲ್ಲದ ನನಗೆ ಒಲಿದಿದ್ದಾದರೂ ಹೇಗೆ?

15 ಫೆಬ್ರ

ಕೆಲವು ದಿನಗಳ ಗೆಳೆಯ…

ಈ ಬದುಕು ಮುಂದುವರಿಯಬಾರದು, ಮುಗಿಸಿಯೇ ಬಿಡಬೇಕು ಅಂದುಕೊಂಡ ತಕ್ಷಣ ನಿನ್ನ ಬಂಗಾರದ ನೆನಪುಗಳು ಹೆಗಲೇರಿ ಕುಳಿತುಬಿಡುತ್ತವೆ ಗೆಳೆಯ. ನೀನು ಮನಸ್ಸಿಗೆ ಮಾಡಿದ ಗಾಯವೆಲ್ಲವ ಮರೆತು, ಹೃದಯಕ್ಕೆ ನೀಡಿದ ಕೆಲವೇ ದಿನಗಳ ಪ್ರೀತಿಯ ನೆನಪಾಗಿ ಮತ್ತೆ ಬದುಕಬೇಕೆಂಬ ಆಸೆಯಾಗುತ್ತೆಕಣೊ. ಕೆಲವೇ ದಿನಗಳ  ಗೆಳೆಯ ನೀನು, ಅಷ್ಟರೊಳಗೆ ಈ ಬದುಕನ್ನ ನೀನು ವ್ಯಾಪಿಸಿಕೊಂಡ ಪರಿದೊಡ್ಡದಿದೆ. ಮಾತಿನಿಂದದೂರವಿರಬಹುದುಕಣೊ, ಆದ್ರೆ ಮನಸ್ಸಿನಿಂದ?ಬದುಕಿನಿಂದ ನೀನು ದೂರವಿರಬಹುದು,
ಆದ್ರೆ ಈ ಪುಟ್ಟ ಹೃದಯದಲ್ಲಿನೀನು ಬಿತ್ತಿದ ಭಾವನೆಗಳಿಂದ?ಕಣ್ಣುಗಳಿಗೆ ನೀನು ಕಾಣಿಸದಿರಬಹುದು ಆದ್ರೆ ಪ್ರತಿ ನಿತ್ಯನಿನ್ನ ಬಗ್ಗೆ ಕಾಣುವ ಕನಸುಗಳಿಂದ?ನನ್ನಿಂದದೂರವಾಗುವುದಕ್ಕೆಂದೆ ಅಷ್ಟು ಪ್ರೀತಿಸಿದೆಯ ನೀನು?ನೋವು ಕೊಡುವುದಕ್ಕೆಂದೆ ಇಷ್ಟು ಒಲವ ತುಂಬಿಸಿದೆಯ ನೀನು? ನನ್ನನ್ನ ಪುಟ್ಟ ಮಗುವಿನಂತೆ ನೀನು ಪ್ರೀತಿಸಿದೆ, ನಾನು ಅಪ್ಪಟದೇವರಂತೆ ಪೂಜಿಸಿದೆ.ಪರಸ್ಪರರಲ್ಲಿ ಮೋಹ ಹುಟ್ಟಿತಾದರೂ ನಾವು ಅದರ ಮೇರೆ ಮೀರಲಿಲ್ಲ. ಮೊದಮೊದಲುಯಾವತ್ತೂನಿನ್ನಪ್ರೀತಿಯಲ್ಲಿ ವಂಚನೆಯಿರಲಿಲ್ಲ, ಕಪಟಕಾಣಲಿಲ್ಲ, ಸುಳ್ಳು ಸುಳಿಯಲಿಲ್ಲ, ನೀನು ನನ್ನ ಬಿಟ್ಟುಮತ್ಯಾರದೋಸುಂದರವಾದಕಣ್ಣುಗಳಲ್ಲಿ ಪ್ರೀತಿ ಹುಡುಕುವವರೆಗೆ.

ನನಗಿಂತ ಅವಳು ಚಂದವಿರಬೇಕುಅಲ್ವ?ನಿನ್ನಿಷ್ಟದ ಹಾಗೆ ಪ್ರತಿ ದಿನ ಜೀನ್ಸ್ ಪ್ಯಾಂಟನ್ನೆ ಹಾಕ್ತಿರಬೇಕು?ಅದಕ್ಕೊಪ್ಪುವ ಟಿ-ಷರ್ಟ್?ಬಾಬ್ಕಟ್ ಮಾಡ್ಸಿದ್ದಾಳ?ಡೈಲಿ ಕಪಾಲಿ ಥಿಯೇಟರಿನಕಾರ್ನರ್ ಸೀಟಾ?ಸಂಜೆ ಎಂ.ಜಿ ರೋಡು, ಬ್ರಿಗೇಡ್ರೋಡಿನ ಹಾಟ್ ಸ್ಪಾಟಾ?ನನಗೆ ಗೊತ್ತು ನೀನು ಶ್ರೀ ಕೃಷ್ಣ ಪರಮಾತ್ಮನಅಪಾವತಾರ, ಅವಳು ಬೋರು ಅನ್ನಿಸಿದ ನಂತರ ಮತ್ತೊಂದು ಬೇಟೆ ಶುರುವಾಗುತ್ತೆ, ಅದನ್ನೂತಿಂದು ಮುಗಿಸಿದ ಮೇಲೆ ಇನ್ನೊಂದು.ಮತ್ತೆಇದೇರೋಟಿನ್ನು, ಸರಿ ಮುಂದೇನು?ಕೊನೆಕೊನೆಗೆ ಬದುಕುಅಸಹ್ಯಅನ್ನಿಸೋಕೆ ಶುರುವಾಗುತ್ತೆ,. ನೀನು ಇಷ್ಟು ಕೆಟ್ಟವನೇಆಗಿದ್ದರೆ ನನ್ನಜೊತೆಯಾಕೆಜೀವದ ಗೆಳೆಯನ ಹಾಗೆ ನಡ್ಕೊಂಡೆ?ನೀನು ಪ್ರೀತಿಸಿದ ಪರಿಎಲ್ಲ ನಾಟಕವ?ಮತ್ತೆ ನನಗ್ಯಾಕೆಅದೆಲ್ಲ ಸುಳ್ಳು ಅನ್ನಿಸ್ತಿಲ್ಲ?ಯಾಕೆಇವತ್ತಿಗೂ ನೀನೇ ಬೇಕು ಅನ್ನಿಸೋ ಹಂಬಲ ನನಗೆ?ತುಂಬ ಅಳಬೇಕು ಅನ್ನಿಸಿದಾಗ ನನ್ನ ಪಾಲಿಗೆ ಇಲ್ಲದಅಮ್ಮ ಮತ್ತುದೇವರುಇಬ್ಬರುಯಾಕೆ ನೆನಪಾಗೊಲ್ಲ? ನಿನ್ನ ಹೆಗಲೇ ಬೇಕು ಅಂತಯಾಕೆಅನ್ನಿಸಬೇಕು ಹೇಳು?ಈಗ ಏನ್ ಮಾಡ್ತಿದ್ದಾನೋ, ನನ್ ನೆನಪು ಒಂದುಕ್ಷಣಕ್ಕಾದರೂ ಅವನಿಗೆ ಆಗತ್ತಾ, ಈಗ ಎಲ್ಲಿರಬಹುದು, ನನ್ ಬಗ್ಗೆ ಯೊಚನೆ ಮಾಡ್ತಇರಬಹುದ, ಇವತ್ತು ಬರಬಹುದ? ನಾಳೆ?, ನಾಡಿದ್ದು,? ಅಥವ ಬರುತ್ತಾನೋಇಲ್ವೋ, ಅಂತ ನಿನ್ ಬಗ್ಗೆ ಯೋಚನೆ ಮಾಡ್ತ ಮಾಡ್ತಾನೆ ನಿನಗೋಸ್ಕರಕಾಯ್ತಾ ಇದ್ದೀನಿ ಕಣೊ.

ಈ ಪತ್ರಓದಿದ ನಂತರ ಸೆಂಟಿಮೆಂಟಲ್ಗರ್ಲ್ಇವಳು ಅಂದ್ಕೊಂಡು ಹರಿದು ಬಿಸಾಕ್ತೀಯಾತಾನೆ?ನನ್ನ ಬಗ್ಗೆ ನಿನಗೆ ಅಸಹ್ಯ ಮೂಡಲೂಬಹುದುಅಲ್ವಾ?ನಾಚಿಕೆಇಲ್ಲದ ಹುಡುಗಿಅಂದ್ಕೊತೀಯೆನೋ?ಒಂದೆರೆಡು ದಿನಜೊತೆಗೆ ಸುತ್ತಾಡಿದ್ದೀನಿ, ಪ್ರೀತಿಯಿಂದ ಮಾತಾಡ್ಸಿದ್ದೀನಿ, ಅದನ್ನೆ ಪ್ರೀತಿ ಅಂದ್ಕೊಂಡಿದ್ದಾಳೆ ಸ್ಟುಪಿಡ್ಗರ್ಲ್ಅಂದ್ಕೊಂಡು ನಗಲೂಬಹುದು ನೀನು.ಯೆಸ್ ನಾನು ಸೆಂಟಿಮೆಂಟಲ್ಅಂಡ್ ಸ್ಟುಪಿಡ್ಗರ್ಲ್,ಯೆಸ್ಅದನ್ನೆ ಪ್ರೀತಿಅಂದೊಂಡೆ.ಅದು ನನ್ನತಪ್ಪಲ್ಲ, ನಿನ್ನ ಕೈ ಹಿಡಿದು ನಡೆಯುವಾಗಜೀವನ ಪೂರ್ತಿ ಇವನು ಹೀಗೆ ಕೈ ಹಿಡಿದುಕಾಪಾಡ್ತಾನೆ ಅನ್ನಿಸಿತ್ತು, ಬೇಸರದಲ್ಲಿದ್ದಾಗ ನೀನು ನನ್ನ ನಗಿಸುತ್ತಿದ್ದರೀತಿ, ಯಾವತ್ತೂ ಇವನು ನೋವಾಗದರೀತಿ ನೋಡ್ಕೋತಾನೆ ಅನ್ನಿಸಿತ್ತು, ನಿನ್ನಜೊತೆಗಿದ್ದಷ್ಟು ದಿನ ಅಭಧ್ರತೆಯ ಭಾವಕಾಡಲಿಲ್ಲ, ಬೇಸರದಛಾಯೆ ಮೂಡಲಿಲ್ಲ, ತುಂಬಾ ಒಳ್ಳೆ ಹುಡುಗಅಂದ್ಕೊಂಡು ಸಣ್ಣಗೆ ಮುದ್ದು ಮಾಡಿದರೂ ಹದ್ದು ಮೀರಲಿಲ್ಲ ಅಲ್ವ ನೀನು? ಹೇಳು ಹೀಗಿರುವಾಗನಿನ್ನ ಪ್ರೀತಿಸದೇ ಹೇಗಿರಲಿ ನಾನು?

ಎಲ್ಲೋಓದಿದ್ದು, ಯಾರೊ ಬರೆದಿದ್ದು ಬದುಕುಅಂದ್ರೆಕಾಂಪ್ರಮೈಸ್ಅಂತೆ.ನಿನ್ನ ಸರಿ ತಪ್ಪುಗಳ ವ್ಯಾಖ್ಯಾನ ಈಗ ಬೇಡ, ನಿನಗೋಸ್ಕರ ನನ್ನ ಬದುಕಿನಲ್ಲಿಕಾಂಪ್ರಮೈಸ್ ಮಾಡ್ಕೊಳ್ಳೊದು ಅಂತತೀರ್ಮಾನ ಮಾಡಿದ್ದೀನಿ, ಹೇಳು, ನಿನಗೆ ನಾನು ಜೀನ್ಸ್ ಹಾಕೋದು ಇಷ್ಟಾನ? ಸರಿಇನ್ ಮೇಲೆ ಚೂಡಿದಾರು, ಸೀರೆಗಳ ಕಡೆ ಮುಖ ಹಾಕುವುದಿಲ್ಲ, ನಾನು ತುಂಬಾ ಮಾತಾಡ್ತೀನಿ ಅಂತ ನಿನಗೆ ಒಂಥರಅನ್ನಿಸುತ್ತಾ?,ಇನ್ ಮೇಲೆ ಹೆಚ್ಚು ಮಾತಾಡೊಲ್ಲ, ನಿನ್ನನ್ನ ಕೇಳಿಸಿಕೊಳ್ತೀನಿ. ನಾನು ಕೇಳುವ ಭಾವಗೀತೆಗಳು ಬೋರ್ ಹೊಡೆಸುತ್ತಾ? ಹಾಗಾದ್ರೆಇವತ್ತಿನಿಂದಲೇನಿನ್ನಹಿಮೇಶ್ರೇಷಿಮಯ್ಯ ನನ್ನ ಪಾಲಿನ ಸಿ.ಅಸ್ವಥ್.ನನಗಿಷ್ಟವಾಗುವ ಹಳೆಯ ಸಿನಿಮಾಗಳು ನಿನಗೆ ನಿದ್ದೆತರಿಸುತ್ತಾ? ಹಾಗಾದ್ರೆದಬಾಂಗ್, ಕ್ರಿಷ್, ಸೀರೀಸ್ ಸಿನೆಮಾಗಳು ನನ್ನ ಪಾಲಿನ ಕಸ್ತೂರಿ ನಿವಾಸ ಹಾಗು ಎರೆಡು ಕನಸು.ನನ್ನಉದ್ದಜಡೆ ನಿನಗೆ ಕಿರಿಕಿರಿ ಅನ್ನಿಸುತ್ತಾ? ಇವತ್ತಿನಿಂದಲೆ ನಾನು ಬಾಬ್ಕಟ್ಗರ್ಲ್.ನಾನು ಹಳ್ಳಿ ಗೌರಿಯ ಹಾಗೆ ಕಾಣಿಸ್ಕೊಂಡ್ರೆ ನಿನ್ನಲ್ಲಿ ಪ್ರೀತಿ ಹುಟ್ಟಲ್ವಾ?ಹಾಗಿದ್ರೆಇವತ್ತೇ, ಲೂಸಿಯ ಬ್ಯೂಟಿಪಾರ್ಲರ್ ಅಕೌಂಟಿಗೆ ನನ್ನದೂ ಮೂರು ಸಾವಿರರೂಪಾಯಿ.

ನಿನಗೆ ಗೊತ್ತಿಲ್ಲಕೊನೆ ಕೊನೆಗೆ ನಿನ್ನ ಸಂತೋಷದಲ್ಲಿ ನನ್ನ ಸಂತೋಷವನ್ನ ಹುಡುಕಲು ಹೊರಟೆ, ನಿನ್ನ ನಗುವಿನಲ್ಲಿನನ್ನ ಅಳುವನ್ನ ಮರೆತೆ, ನೀನು ನನ್ನ ಸಾನಿಧ್ಯದಲ್ಲಿದ್ದಾಗ ಪ್ರಪಂಚದ ಸುಖ ಸಂತೋಷಗಳನ್ನೆಲ್ಲ ನನ್ನ ಕಣ್ಣುಗಳಲ್ಲೇ ಸುರಿದುಕೊಂಡ ಹಾಗೆ ಸಂಭ್ರಮಿಸಿದೆ,ಒಂದು ದಿನಇಲ್ಲವಾದಾಗ ಸಾವಿರ ಸಲ ನಿನ್ನ ನೆನಪಿಸಿಕೊಂಡೆ, ಯಾವತ್ತೋ ನೀನು ಕಳಿಸಿದ ಮಾಮೂಲಿ ಮೆಸ್ಸೆಜುಗಳನ್ನೆ ಮತ್ತೆ ಮತ್ತೆಓದಿಕೊಂಡು ನಲಿದೆ, ನೋವ ಮರೆತೆ. ಗೆಳತಿಯರ ಹತ್ತಿರ ನಿನ್ನಕುರಿತು ಹೇಳಿಕೊಂಡೆ.ಅಲ್ಲ ಹೇಳಿಕೊಂಡೇ ಅನ್ನುವುದಕ್ಕಿಂತ ನಿನ್ನ ಬಗ್ಗೆ ಕೊಚ್ಚಿಕೊಂಡೆ, ನಿನ್ನಂತ ಸ್ಮಾರ್ಟ್ ಫೆಲೋ, ಅಷ್ಟೊಂದು ಸುಂದರಿಯಲ್ಲದ ನನಗೆ ಒಲಿದಿದ್ದಾದರೂ ಹೇಗೆ ಅನ್ನುವ ಬಗ್ಗೆ ಗೆಳತಿಯರು ಪಿ.ಎಚ್.ಡಿ ಮಾಡತೊಡಗಿದರು, ಹೊಟ್ಟೆಕಿಚ್ಚು ಪಟ್ಟುಕೊಂಡರು.ಅವರ ಅಸೂಹೆ ಕಂಡು ನನಗೊಂತರ ಖುಷಿ,ಹೆಮ್ಮೆ,ಸಡಗರ. ನೀನು ಜೊತೆಗಿದ್ದ ಕೆಲವು ದಿನಗಳನ್ನೆ ಕೆಲವು ವರ್ಷಗಳು ಅಂದುಕೊಂಡು ಬದುಕುತಿದ್ದೀನಿ, ಯಾವತ್ತು ಬರುತ್ತೀ ಹೇಳು, ಈ ಬದುಕನ್ನ ನಿನ್ನ ಮಡಿಲಿಗೆ ಸುರಿಯಬೇಕಿದೆ, ಅತ್ತು ಹಗುರಾಗಬೇಕಿದೆ, ಮತ್ತೆಯಾವತ್ತೂ ನನ್ನಿಂದದೂರ ಹೋಗದಷ್ಟು ಪ್ರೀತಿ ಸುರಿಯಬೇಕಿದೆ, ಈ ಬದುಕು ಮುಂದುವರಿಯಬೇಕಿದೆ, ನಿನ್ನ ಸಾನಿಧ್ಯ ಬೇಕಿದೆ.

ನಿನ್ನಪ್ರೀತಿಯ
ಕೆಲವು ದಿನಗಳ ಗೆಳತಿ

ನಿಮ್ಮನ್ನ ಪ್ರೀತಿಸೋಕೆ ನಾನು ಸಾವಿರ ಕಾರಣಗಳನ್ನ ಕೊಡ್ತೀನಿ..

29 ಡಿಸೆ

ಹಾಯ್ ಕೆನ್ನೆಯ ಮೇಲಿನ ಮಚ್ಚೆಯ ಹುಡುಗಿ,

ಹೇಗಿದ್ದಿರಿ? ನಿಜ ಹೇಳಿದ್ರೆ ಕೋಪ ಮಾಡ್ಕೋತೀರಿ, ನೀವು ಎಂದಿನಂತೆ ನಿನ್ನೆ ಕೂಡ ನನ್ನ ಕನಸಿಗೆ ಬಂದಿದ್ರಿ, ಅದೆಷ್ಟು ಸಲ ಮುದ್ದು ಮಾಡಿದೆನೊ ಗೊತ್ತಾಗ್ತಿಲ್ಲ, ಹೀಗೆ ಕನಸಿಗೆ ಬರೋದು, ನಾನು ಕನಸಲ್ಲೆ ಜಯಂತ್ ಕಾಯ್ಕಿಣಿ ಅಣ್ಣ ಬರೆದ ಎಲ್ಲ ಪ್ರೇಮದ ಹಾಡುಗಳನ್ನ ನಿಮ್ಮ ಮುಂದೆ ಹಾಡಿಕೊಳ್ಳೋದು, ನೀವು ನಾಚುತ್ತಾ ಮಚ್ಚೆಯಿರುವ ಕೆನ್ನೆ ತೋರಿಸೋದು, ನಾನು ನಿಮ್ಮ ಕೆನ್ನೆಗೆ ಮುತ್ತಿಡೋದ, ಅಲ್ಲಿರುವ ಮುದ್ದು ಮಚ್ಚೆಗೆ ಮುದ್ದು ಮಾಡೋದ ಅಂತ ಯೋಚನೆ ಮಾಡುವಷ್ಟರಲ್ಲೆ, ‘ಗೆಟ್ ಲಾಸ್ಟ್ ಈಡಿಯಟ್’ ಅಂತ ನೀವು ನಿಮ್ಮ ೧೨.ಬಿ ಬಸ್ಟಾಪಿನಲ್ಲಿ ಆರು ವರ್ಷಗಳ ಹಿಂದೆ ಬೈದಿದ್ದು ನೆನಪಾದ ಕೂಡಲೆ ಅಯ್ಯೋ ಇದು ಕನಸಾ ಎಂದುಕೊಂಡು ಮತ್ತೆ ಮರು ದಿನದ ಕನಸಿನವರೆಗೂ ಕಾಯುತ್ತೀನಿ ಅದೇ ಪ್ರೀತಿಯಿಂದ.

ನಿಜ ಅಪ್ಪು ಡಿಯರ್, ನಿಮ್ಮ ಮೇಲಿನ ನನ್ನ ‘ಅಪೂರ್ವ’ವಾದ ಹಂಬಲಕ್ಕೆ ಇವತ್ತಿಗೆ ಆರು ವರ್ಷಗಳ ತುಂಬು ಹರೆಯ.! ಇವತ್ತಿಗೂ ನಿಮ್ಮ ಮೇಲೆ ಅದೇ ಪ್ರೀತಿಯನ್ನಿಟ್ಟುಕೊಂಡು ಕಾಯ್ತಿದ್ದೀನಿ, ನಿಮ್ಮದು ಮಾತ್ರ ಮುದ್ದು ಗೌರಿಯ ಮೌನ. ೨೧೯೦ ದಿನಗಳು ಕಳೆದು ಹೋದರೂ ನಿಮ್ಮ ಮೌನ ಮಾತ್ರ, ಕೊನೆಗೂ ನನ್ನ ಜೊತೆಗಿನ ಒಂದೇ ಒಂದು ಮಾತಾಗಲೇ ಇಲ್ಲ. ಇಷ್ಟು ದಿನಗಳು ಕಳೆದರೂ ಅವತ್ತೂ ನಿಮ್ಮೆಡೆಗಿದ್ದ ಪ್ರೀತಿಗೆ ಇವತ್ತಿಗೂ ಒಂದಿಷ್ಟು ಮುಪ್ಪು ಬಂದಿಲ್ಲ, ಆದರೆ ತುಂಬಾ ತುಂಬಾ ಮುದ್ದು ಬಂದಿದೆ. ಎಸ್ಸೆಸ್ಸೆಲ್ಸಿಯಲ್ಲಿ ಹುಡುಗಾಟಕ್ಕೆಂದು ಲವ್ ಯು ಅಂದವನು ನಾನು, ಇವತ್ತು ನಿಮ್ಮ ಜೊತೆ ಜೀವನ ಹಂಚ್ಕೊಳ್ಳೋಕೆ ಲವ್ ಯು ಅಂತಿದ್ದೀನಿ. ಇಷ್ಟು ದಿನ ಕೇವಲ ಪ್ರೇಮಿಯಾಗಿದ್ದ ನಾನು, ಇವತ್ತು ಬಾಳ ಸಂಗಾತಿಯಾಗ್ತೀರಾ ಅಂತ ಕೇಳ್ಕೊತಿದ್ದೀನಿ, ಬಾಳ ಸಂಗಾತಿಯಾದ ಮೇಲು ಕೂಡ ಪ್ರೇಮಿಯಾಗೆ ಉಳ್ಕೋತೀನಿ ಅಂತ ಭರವಸೆ ಕೊಡ್ತೀನಿ, ಪ್ಲೀಸ್ ಅಪ್ಪು ಡಿಯರ್, ನಿಮ್ಮನ್ನ ಪ್ರೀತಿಸೋಕೆ ನಾನು ಸಾವಿರ ಕಾರಣಗಳನ್ನ ಕೊಡ್ತೀನಿ, ಆದರೆ ನೀವು, ನಾನ್ ಕಪ್ಪಿದ್ದೀನಿ ಅನ್ನೋ ಒಂದೇ ಕಾರಣವನ್ನ ಬಿಟ್ಟು ಬೇರೆ ಕಾರಣ ಕೊಡೋಕ್ ಆಗತ್ತಾ ಅಪ್ಪು ಡಿಯರ್?.

ನೀವು ಕೆಟ್ಟೋರಲ್ಲ ಅಪ್ಪು, ತುಂಬಾ ಒಳ್ಳೆಯವರು, ನನ್ ಮೇಲೆ ನಿಮಗೆ ಪ್ರೀತೀನೆ ಇಲ್ಲ ಅಂದಿದ್ರೆ ಡಜನ್‌ಗಟ್ಲೆ ಹುಡುಗರನ್ನ ಯಾಕೆ ರೆಜೆಕ್ಟ್ ಮಾಡ್ತಿದ್ರಿ? ೧೨.ಬಿ ಬಸ್ಟಾಪಿನಲ್ಲಿ ಬಸ್ಸು ಹತ್ತೋವಾಗ್ಲೆಲ್ಲ ‘ಕಾವೇರಿ’ ಬೇಕರಿ ಕಡೆ ಯಾಕ್ ನೋಡ್ತ ಇರ್ತೀರಿ ಹೇಳಿ ನೋಡೋಣ? ಅಲ್ಲಿ ನಾನ್ ಇದ್ದೇ ಇರ್ತೀನಿ ಅನ್ನೋದು ನಿಮ್ಗೆ ಗೊತ್ತಿರೋ ವಿಚಾರಾನೆ ಅಲ್ವಾ? ಸಂಜೆ ಬಸ್ಸ್ ಇಳಿದೋರು ಜಪ್ಪಯ್ಯ ಅಂದ್ರು ಮನೆಗ್ ಯಾಕ್ ಹೋಗಲ್ಲ? ಯಾಕ್ ಹಾಗೆ ಬಸ್ಟಾಪ್ನಲ್ಲಿ ಕೂತ್ಕೋತೀರಿ,? ಪಕ್ಕದಲ್ಲೇ ಇರೋ ಹೋಟೆಲ್ಲಿನ ಮೂಲೆಯಲ್ಲಿ ನಾನು ಕಾಣಿಸಿಕೊಂಡ್ ತಕ್ಷಣ ಬಿರುಗಾಳಿ ಹಂಗೆ ಹೊರಟು ಹೋಗ್ತೀರಿ ಅಲ್ವಾ ಇದಕ್ಕೆ ಕಾರಣ ಪ್ರೀತಿ ಅಲ್ಲದೇ ಮತ್ತೇನ್ ಹೇಳೀ ನೋಡೋಣ? ಅಲ್ರೀ.. Every heart has a pain… Only the way of expression is different… some hide it in their eyes while some hides in their smile ಅಂತ ಮೆಸ್ಸೇಜ್ ಮಾಡಿ ಯಾಕ್ರಿ ಮೊಬೈಲ್ ಸ್ವಿಚ್ ಆಫ್ ಮಾಡ್ತೀರಿ? ನೋಡಿ ನನಗೆ ಗೊತ್ತು ನನ್ ಮೇಲೆ ಪ್ರೀತಿ ಇದೆ ನಿಮ್ಗೆ, ಆದ್ರೆ ಹೇಳ್ಕೋತಿಲ್ಲ ಸ್ವಲ್ಪ ಸ್ವಾಭಿಮಾನ ಜಾಸ್ತಿ ಅಲ್ವ? ನಾನ್ ಇಷ್ಟ ಪಡ್ತೀನಿ ಅಪ್ಪು, ನಿನ್ ಮದ್ವೆ ಆಗ್ತೀನಿ ಅಂದ್ರೂ ಕೂಡ, ಬೆಣ್ಣೆ ತರ ಹುಡುಗಿಗೆ, ರಾಗಿ ಮುದ್ದೆ ತರ ಇರೋ ಹುಡುಗನ್ ಜೊತೆ ಎಂತ ಸಂಬಂಧ ಅನ್ನೋ ಯೋಚನೆ ಅಲ್ವ ನಿಮ್ಗೆ?.

ಸರಿ ಅಪ್ಪು, ನಮ್ಮ ಪ್ರೀತಿಗೆ ಅಯ್ಯೋ ಕ್ಷಮಿಸು, ನನ್ನ ಪ್ರೀತಿಗೆ ಇವತ್ತಿಗೆ ಆರು ವರ್ಷ ತುಂಬ್ತಾ ಇದೆ, ಇದನ್ನ ಸೆಲಬ್ರೇಟ್ ಮಾಡೋ ಮೂಡಲ್ಲಿ ನಾನಂತು ಇದ್ದೀನಿ, ಪ್ರತಿ ಡಿಸೆಂಬರ್ ತಿಂಗಳ ೨೯ನೆ ತಾರೀಕು ನನಗೆ ವ್ಯಾಲಂಟೇನ್ಸ್ ಡೇ, ಯಾಕಂದ್ರೆ ಅವತ್ತೇ ನೀವು ನನಗೆ ಸಿಕ್ಕಿದ್ದು. ಪ್ರತಿವರ್ಷದ ಹಾಗೆ ಈ ವರ್ಷವು ನೀವು ಮುನಿಸಿಕೊಂಡ ಮುನಿಯಮ್ಮನ ಹಾಗೆ ಆಡಿದ್ರೆ ತುಂಬಾನೆ ಹರ್ಟ್ ಆಗತ್ತೆ. ಹೆಚ್ಚೇನು ಇಲ್ಲ, ಇವತ್ತು ಸಂಜೆ ಅದೇ ೧೨.ಬಿ ಬಸ್ಟಾಪಿನ ಕಾವೇರಿ ಬೇಕರಿಯ ಪಕ್ಕದ ಹೋಟೇಲಿನ ಮೂಲೆಯಲ್ಲಿ ನಿಮಗಿಷ್ಟವಾದ ಪಾನಿಪೂರಿ ಹಿಡಿದುಕೊಂಡು ನಿಂತಿರುತ್ತೇನೆ, ನಿಮಗಿಷ್ಟವಾದರೆ ನಿಮ್ಮ ಮನೆಯ ಆಲದ ಮರದವೆರೆಗೂ ನಿಮಗೆ ಒಂಚೂರು ಕೈತಾಕಿಸದ ಹಾಗೆ ನಿಮ್ಮೊಂದಿಗೆ ಹೆಜ್ಜೆಹಾಕುತ್ತೇನೆ, ತುಂಬಾ ಒಳ್ಳೆ ಹುಡುಗ ಅಂದುಕೊಂಡು ನನ್ನ ಪ್ರೀತಿಗೆ ನೀವು ಒಪ್ಪಿಕೊಂಡರೆ, ಅದೇ ಆಲದ ಮರೆಯಲ್ಲಿ ನಿಮಗೂ ಗೊತ್ತಾಗದ ಹಾಗೆ ನಿಮ್ಮ ಕೆನ್ನೆಯ ಮೇಲಿನ ಮೆಚ್ಚೆಗೆ ಒಂದು ಮುತ್ತು, ನಿಮಗೆ ಎರಡು. !!

ನಿಮ್ಮ ನವಿಲುಗರಿ ಹುಡುಗ

ಪ್ರೀತಿ ನರಳಿದರೆ ಹೃದಯ ಅರಳೊಲ್ಲ ಗೆಳೆಯಾ..

4 ಆಕ್ಟೋ

ವಾಸು ನೀನು ಬದುಕಿನ ಮುಖ್ಯ ತಿರುವಿನಲ್ಲಿ ಸಂಭ್ರಮದ ಭಾವಗೀತೆ ಪಲ್ಲವಿಸುವಾಗ ಅಪಸ್ವರದ ಉನ್ಮಾದ ಹೊರಡಿಸುವವನು, ನೀನು ಬದುಕಿನ ಮುಖ್ಯ ತಿರುವಿನಲ್ಲಿ ನನ್ನ ಕೈ ಹಿಡಿಯದೇ ಹೋದವನು, ನೀನು ಪ್ರೀತಿಯ ಹೆಸರಲ್ಲಿ ಕೈಗೆ ಮೋಸದ ಸರಕು ತುಂಬಿಸಲು ಬಂದವನು ಕಣೋ. ಕಣ್ಣು ಪ್ರೀತಿಯ ದಾರಿ, ಹೃದಯ ಪ್ರೀತಿಯ ಸ್ವರ್ಗ, ಕನಸು ಪ್ರೀತಿಯ ಹೊರಪ್ರಪಂಚ, ಅಲ್ಲಿ ಮಿಡಿಯುವ ಭಾವನೆಗಳೇ ಬದುಕಿನ ಸಂಗೀತ ಅಂತಾರೆ, ಆದರೆ ಈ ಕಣ್ಣೀರಿದೆಯಲ್ಲ ವಾಸು, ಅದು ನಿಜವಾದ ಪ್ರೀತಿಯ ಉಡುಗೊರೆಯಂತೆ ಕಣೊ, ಅಂತಹ ಕಣ್ಣ ಹನಿಗಳನ್ನ ದುಃಖದ ಸಂಕೇತವನ್ನ ಮಾಡಿದವ ನೀನು. ಈಗ ನನ್ನಿಂದ ಜಾರುವ ನಾಲ್ಕು ಹನಿಗಳು ಯಾಕೋ ಅರ್ಥ ಕಳೆದುಕೊಳ್ಳುತ್ತಿವೆ ವಾಸು, ಈ ಬದುಕಿಗೆ ಒಂದು ಅರ್ಥ ತಂದವನೂ ನೀನೆ, ಅದಕ್ಕೊಂದು ಅರ್ಥವಿಲ್ಲದಂತೆ ಮಾಡಿದವನೂ ನೀನೆ ಪ್ರತಿ ಕ್ಷಣಗಳೂ ನಗುವಿನ ಕುರಿತೇ ಮಾತನಾಡುತ್ತಿದ್ದ ನೀನು ಇಂದ್ಯಾಕೊ ಕಣ್ಣೀರ ಕಡಲಿಗೆ ನೂಕಿಬಿಟ್ಟೆ?

ನೀನಡವೆ ಹಾದಿಯಲ್ಲಿ ನಗೆ ಹೂವು ಬಾಡದಿರಲಿ ಹಾಡಿನ ಸಾಲುಗಳು ಈ ದೇವಕಿಯ ಗುಂಡಿಗೆಯ ಜೀವವಾಹಿನಿಯಾಗಿ ಹರಿದಿದ್ದವು, ಆದರೆ ಈಗ? ಪಾಪ ಯಾರದೋ ಪರಿತಾಪ ಯಾರದೋ ಎಂಬಂತೆ ಕಂಡ ನನ್ನ ಕನಸುಗಳನ್ನೆಲ್ಲ ಕರುಣೆಯಿಲ್ಲದೇ ಹೊಸಕಿ ಹಾಕಲು ಮನಸ್ಸಾದರೂ ಹೇಗೆ ಬಂತು ? ಬೆಟ್ಟದಂತಾ ಅಪರಾಧವನ್ನೂ ನಮ್ಮ ಪ್ರೀತಿಯ ನದಿಯ ಮಧ್ಯೆ ಅಣೆಕಟ್ಟೆಯಂತೆ ಕಟ್ಟಿಬಿಟ್ಟೆ, ಇಂಥ ಕಲ್ಲು ಮನಸ್ಸು ನಿನಗೆ ಬೇಕಿತ್ತ ವಾಸು? ನಮ್ಮ ಪ್ರೀತಿಗೆ ಮಮತೆಯ ಜೋಗುಳದ ಹಾಡು ಬೇಕಿತ್ತೇ ವಿನಹ ಪಲ್ಲವಿ ಚರಣಗಳಿಲ್ಲದ ಹಾಡಲ್ಲ, ಇಲ್ಲಿಗೆ ಎಲ್ಲದಕ್ಕೂ ಫುಲ್ ಸ್ಟಾಪ್ ಹಾಕ್ತ ಇದ್ದೀನಿ ವಾಸು . ನಾನಂದುಕೊಂಡ ಹಾಗೆ ಏನೂ ನಡೆಯಲಿಲ್ಲ. ಹಾಗಂತ ತುಂಬ ದೊಡ್ಡದನ್ನೇನು ಬಯಸಿರಲಿಲ್ಲ. ಇಲ್ಲಿಯವರೆಗೆ ಪ್ರೀತಿಪೂರ್ವಕವಾಗಿಯೇ ಕೆಲವು ನೋವುಗಳನ್ನ ಅಪ್ಪಿಕೊಂಡು ಬದುಕಿದೆ ಅದೆಲ್ಲವೂ ನಿನಗಾಗಿ ಅಂತ ನಿನಗೇ ಗೊತ್ತಿದೆ.

ಜಗತ್ತಲ್ಲಿ ಯಾವ ನೋವನ್ನಾದರೂ ಅನುಭವಿಸಬಹುದೇನೋ.. ಆದರೇ ಪ್ರೀತಿಸಿದವರ ನಂಬಿಕೆ ದ್ರೋಹ ? ಬೇಡ ಬಿಡು ಹೆಚ್ಚಿನದೇನನ್ನೂ ಬರೆಯಲಾಗುತ್ತಿಲ್ಲ. ದಿನಕ್ಕೊಂದು ಪತ್ರವನ್ನ ದೇವಕಿಯ ಮಡಿಲಿಗೆ ಹಾಕುತ್ತಿದ್ದ ನನ್ನ ವಾಸು, ಕೇವಲ ಒಂದೇ ಒಂದು ಸಾಲು ಬರೆಯಲಾಗದೇ ಖಾಲಿಯಾಗಿದ್ದಾನೆ ಅನ್ನುವುದು ಈ ದೇವಕಿಗೆ ಗೊತ್ತಾಗಿದೆ. .ಇಲ್ಲಿ ದೇವರ ಕ್ರೂರ ದೃಷ್ಟಿ ಇರಬಹುದು, ಪ್ರೀತಿಯ ನಿರ್ಧಯಿ ಹಂತಕನಾದ ನಿನ್ನ ಪ್ರೀತಿಯ ಮುಖವಾಡವಿರಲೂಬಹುದು, ಅಥವ ಈ ಜಗತ್ತಿನಲ್ಲಿ ಒಂದು ಸಣ್ಣ ಖುಷಿಯನ್ನೂ ಅನುಭವಿಸಲಾರದ ಈ ಖೊಟ್ಟಿ ನಸೀಬು ಇದ್ದರೂ ಇರಬಹುದು, ದೇವರೇ ಇಂತ ಯಾತನಮಯ ಸಮಯ ಜಗತ್ತಿನ ಯಾವ ಜೀವಕ್ಕೂ ಬೇಡ. ನಿಂಗೆ ಒಂದ್ ಮಾತು ಹೇಳ್ಬೇಕು ನಾನು… ಏನ್ ಗೊತ್ತ ವಾಸು, ನಿರ್ಮಲವಾದ ಪ್ರೀತಿ ನರಳಿದರೆ ಈ ಬದುಕಿನಲ್ಲಿ ಯಾವ ಹೂವುಗಳು ಅರಳೋದಿಲ್ಲ ವಾಸು.

ಇಂತಿ
ನಿನ್ನವಳಲ್ಲ..

(ದೇವಕಿ ಬ್ಲಾಗಿಗೆ ಬರೆದಿದ್ದು)

ಮುಂದಿರುವ ಬದುಕನ್ನ ನೆನೆಸಿಕೊಂಡರೇ ದಿಗಿಲುಗೊಳ್ಳುತ್ತೇನೆ.

4 ಆಕ್ಟೋ

ಕೊನೆಗೂ ದೇವರು ಅನ್ನುವ ನಾಜೂಕಯ್ಯ ನಿನ್ನ ವಿಷಯದಲ್ಲಿ ನನ್ನ ಪ್ರೀತಿ ತುಂಬಿದ ನಂಬಿಕೆಗಳನ್ನ ಹುಸಿಮಾಡಿಬಿಟ್ಟ . ನನ್ನ ಬದುಕಿನ ಪ್ರತಿ ದಿನದ ಪ್ರತಿ ಕ್ಷಣಗಳಲ್ಲಿ ಕೂಡ ನಾನು ನಿನ್ನ ಕುರಿತಾಗಿ ಒಂದೊಂದು ಕನಸು ಕಟ್ಟುತ್ತಿದ್ದೆ. ಆದರೇ ಅದಷ್ಟೂ ಕನಸುಗಳಿಗೆ ಮಣ್ಣಿನ ಹೊದಿಕೆಯ ಹೊದ್ದಿಸಿ ಮಲಗಿಸಿಬಿಟ್ಟೆ ನೀನು. ನಿನ್ನ ಮೇಲಿನ ಮೊದಲ ಪ್ರೀತಿಯಿಂದಾನೆ ಕೇಳ್ತಾ ಇದ್ದೀನಿ ಜಗತ್ತಿನಲ್ಲಿರುವ ಎಲ್ಲಾ ನೋವುಗಳೂ ನನಗೊಬ್ಬನಿಗೇ ಯಾಕೆ ? ಬದುಕಿನ ಕಡೆಯ ಕ್ಷಣಗಳವರೆಗೂ ಈ ನಿನ್ನ ಹುಡುಗ ನೋವಿನ ಅರಮನೆಯ ರಾಜಕುಮಾರನಾಗಿಯೇ ಇರಬೇಕಾ?

ಎದೆಯ ಎಲ್ಲ ತರಂಗಗಳಲ್ಲಿಯೂ ಬದುಕಿನ ಚಿತ್ತಾರ ಮೂಡಿಸಿದವಳು ನೀನು. ಅದೇ ತರಂಗಗಳಿಗೆ ವಿದಾಯದ ಕಹಿಯನ್ನೇಕೆ ತುಂಬಿದೆ ದೇವಕಿ? ಎದೆಯೊಳಗಿನ ಆಪ್ತ ಗೀತೆಯಂತಿದ್ದೆ ಅಲ್ಲವೇ ನೀನು, ಕೊನೆಗೂ ನನ್ನ ಪಾಲಿನ ಕಾಮನಬಿಲ್ಲಾಗಿಬಿಟ್ಟೆಯಲ್ಲ ನೀನಿರುವ ದೂರವೆಷ್ಟು ದೇವಕಿ? ನೀನು ಘೋರಿ ಕಟ್ಟಿದ ಪ್ರತಿ ಕನಸಿಗೂ ಗೂಡು ಕಟ್ಟೋದು ಬಲ್ಲೆ, ಅದು ನೀನೆ ನನಗೆ ಪ್ರೀತಿಯಿಂದ ಕಲಿಸಿದ ಪಾಠ. ಆದರೆ ನೀನಿಲ್ಲದೆ ನಾನು ಕಟ್ಟುವ ಗೂಡಿಗೆ ಹೆಚ್ಚಿನ ಆಯುಷ್ಯವಿಲ್ಲವೆಂದು ಮಾತ್ರ ಬಲ್ಲೆ ದೇವಕಿ.
ಬದುಕಿನ ಗೀತೆಯನ್ನ ನಿನ್ನ ಜೊತೆಯೇ ಹಾಡಬೇಕೆಂದು ಬೆಟ್ಟದಷ್ಟು ಕನಸ ಎದೆಯೊಳಗಿಟ್ಟುಕೊಂಡು ಕುಳಿತಿದ್ದ ಹುಡುಗ ನಾನು. ಗೀತೆಯ ಮೊದಲ ಸಾಲಿನಲ್ಲೇ ನಿನ್ನ ಜೊತೆಯಿಲ್ಲ..ಹಾಡುವುದಾದರೂ ಹೇಗೆ ದೇವಕಿ? ನಾನು ಹೋಗುವ ದಾರಿಯಲ್ಲಿ ನಿನ್ನ ಪುಟ್ಟ ಹೆಜ್ಜೆ ಜೊತೆಗಿರುತ್ತೆ ಅನ್ನುವ ನಂಬಿಕೆಯಲ್ಲಿ ಸಂತೋಷದಿಂದ ಹೆಜ್ಜೆ ಹಾಕುತ್ತಿದ್ದೆ..ಮೊದಲೆರೆಡು ಹೆಜ್ಜೆಯೇ ಮುಗಿದಿಲ್ಲ ಅದೆಲ್ಲಿಗೆ ನಿನ್ನ ಪಯಣ? ನನ್ನ ಹೆಜ್ಜೆಗಳೀಗ ಅನುಭವಿಸುತ್ತಿರುವ ತಬ್ಬಲಿತನಕ್ಕೆ ಹಾಡುವವರು ಯಾರು ?

ಈ ಬದುಕಿನಲ್ಲಿರುವ ಎಲ್ಲಾ ನೋವುಗಳ ತೂಕ ಒಂದಾದರೆ ಕಾರಣವೇ ಇಲ್ಲದೆ ಮುನಿದು ಹೋದ ನೀನು ಮತ್ತೆ ನಿನ್ನ ತಿರಸ್ಕಾರದ ತೂಕವೇ ಇನ್ನೊಂದು. ಇಲ್ಲಿ ಬರೆದಿದ್ದೆಲ್ಲ ನಿನ್ನ ಮೇಲಿನ ಕೋಪದಿಂದಾಗಲೀ ನೋವಿನಿಂದಾಗಲಿ ಅಲ್ಲ . ಕೆಲವೊಂದು ಸಲ ಮುಂದಿರುವ ಬದುಕನ್ನ ನೆನೆಸಿಕೊಂಡರೇ ದಿಗಿಲುಗೊಳ್ಳುತ್ತೇನೆ. ತುಂಬಾ ಮನುಷ್ಯನಿಗೆ ತುಂಬಾ ನೋವಾದಾಗ, ಕಷ್ಟಗಳು ಬಂದಾಗ, ಇನ್ನು ಬದುಕು ಸಾಧ್ಯವೇ ಇಲ್ಲ ಅನ್ನುವಾಗ ಯಾವ ದೇವರು ನೆನಪಾಗೋದಿಲ್ಲ. ಯಾವುದಾರೊಂದು ಹೆಗಲು ನೆನಪಾಗುತ್ತೆ, ಬೆಚ್ಚನೆಯ ಎದೆ ಬೇಕು ಅನ್ನಿಸುತ್ತೆ, ಕಣ್ಣೊರೆಸುವ ಒಂದು ಕೈಯ್ಯನ್ನ ಜೀವ ಬೇಡುತ್ತೆ. ತುಂಬಾ ನೋವಿನಲ್ಲಿದ್ದೀನಿ, ನೋವಾಗುತ್ತಿದೆ. ದೇವರಂತೂ ನನ್ನ ಬದುಕಿನಲ್ಲಿ ಮುನಿದು ಹೋಗಾಗಿದೆ ಮತ್ತು ದೇವರಂತಿದ್ದ ನೀನು. ಇಬ್ಬರೂ ಕಾರಣ ಹೇಳದೇ ಹೋಗಿದ್ದೀರಿ. ಕಾರಣವಿಲ್ಲದೆ ಬಂದುಬಿಡಿ,
ಅಂಗೈಯ್ಯಲ್ಲೆ ಬದುಕಿದೆ, ಜಾರಿ ಬೀಳುವ ಮುನ್ನ

ವಾಸು..:)

(ನನ್ನ ದೇವಕಿ ಬ್ಲಾಗ್ ಗೆ ಬರೆದ ಹಳೆ ಪತ್ರ )

ನೀನು ಕರಿಯ, ನಾನು ಬೆಳದಿಂಗಳು. ನೀನು ಪೆದ್ದು, ನಾನು ಮುದ್ದು.

28 ಸೆಪ್ಟೆಂ

ಹಾಯ್ ಈಡಿಯಟ್ ಹೇಗೆದ್ದೀಯಾ? ನಿಂಗೆ ಈಡಿಯಟ್ ಅಲ್ಲದೇ ಬೇರೆ ಹೆಸರು ಒಪ್ಪಲ್ಲ ಕಣೋ, ಅಮ್ಮನ ಪಕ್ಕ ಕುಳಿತು ಲಕ್ಷ್ಮೀ ಸರಸ್ವತಿ ಪೂಜೆ ಮಾಡ್ತಾ ಇದ್ದ ಮುದ್ದು ಗೌರಿಯಂತ ಹುಡುಗೀನ, ಹೀಗೆ ಕೋಣೆಯ ಬಾಗಿಲು ಹಾಕೊಂಡು ೧೪೩ ಮಗ್ಗಿ ಗಟ್ಟು ಮಾಡುವ ಹಾಗೆ ಮಾಡ್ಬಿಟ್ಯಲ್ಲೋ? ನೀನು ಕರಿಯ ನಾನು ಬೆಳದಿಂಗಳು, ನೀನು ಪೆದ್ದು ನಾನು ಮುದ್ದು, ನೀನು ಕೊಳ್ಕ ನಾನು ಫೇರ್ ಅಂಡ್ ಲವ್ಲಿ, ನೀನು ಒರಟ ನಾನು ಹಾಲುಗೆನ್ನೆಯ ಹುಡುಗಿ, ನೀನು ಯೆಸ್ಸೆಸ್ಸೆಲ್ಸಿ ಡುಮ್ಕಿ, ನಾನು ಬೀಯೆಸ್ಸಿ ಟಾಪು, ನಾನು ಎಮ್.ಜಿ ರೋಡು ನೀನು ಕೊತ್ತನೂರು, ನಾನು ಪಿ.ವಿ.ಅರ್, ನೀನು ಬಾಲಜಿ ಟೆಂಟು, ನಾನು ಪುಳಿಯೊಗರೆ ನೀನು ಎಸ್.ಎಲ್.ವಿ ಕಾಲುಸೂಪು, ನಾನು ಎಮ್ಮೆಸ್ ಸುಬ್ಬುಲಕ್ಷ್ಮಿ ನೀನು ಹರಿಕೃಷ್ಣ, ನಾನು ಶಿವ ಶಿವ ಗುರುರಾಘವೇಂದ್ರ ಸ್ವಾಮಿ, ನೀನು ಜಲಗೇರಮ್ಮ ಮುಳ್ಕಟ್ಟಮ್ಮ ದೇವಿ, ನಾನು ತುಳಸಿ ಪಂಚಾಮೃತ ತೀರ್ಥ, ನೀನು ಪಕ್ಕ ಲೋಕಲ್ ಒರ್ಜಿನಲ್ ಚಾಯ್ಸು, ಛೇ ಏನ್ ಜೀವ್ನನೋ ನಿಂದು? ಒಂದೂ ಮ್ಯಾಚ್ ಆಗ್ತಾ ಇಲ್ವಲ್ಲ?

ನಂಗೆ ಈಗಾಗ್ಲೆ ಭಯ ಶುರುವಾಗಿದೆ. ಮನೆಯಲ್ಲಿ ಗಂಡಿನ ಭೇಟೆ ಶುರುವಾಗಿದೆ ಕಣೋ, ಶಂಡಿಗೆ ಮುಖದ ಜೋಯಿಸ ಅದೆಲ್ಲೆಲ್ಲಿಂದನೋ ಕುರಿಗಳನ್ನ ಹಿಡ್ಕೊಂಡ್ ಬರೊ ಹಾಗೆ ಗಂಡುಗಳನ್ನ ಹಿಡ್ಕೊಂಡ್ ಬರ್ತಿದ್ದಾನೆ.. ಗಂಡಿನ ಮುಖ ಸರಿ ಇಲ್ಲ, ಕಿವಿ ಅಗಲ, ಮೂಗು ಸೊಟ್ಟಗಿದೆ, ತಲೇನಲ್ಲಿ ಬಿಳಿ ಕೂದ್ಲು ಶುರುವಾಗಿದೆ, ಹುಡುಗನ ಕಾಲು ಸಣ್ಣ, ಹೀಗೆ ಪ್ರದಿ ದಿನ ಒಂದೊಂದು ಕಾರಣ ಹೇಳಿ ತಪ್ಪಿಸ್ಕೋತ ಇದ್ದೀನಿ, ಅದ್ಯಾವ ಜನ್ಮದಲ್ಲಿ ನನ್ ಶತೃ ಆಗಿದ್ನೋ ಜೋಯೀಸ ಗಂಡುಗಳನ್ನ ಮನೆಯ ಮುಂದೆ ತಂದು ಪೆರೇಡ್ ಮಾಡಿಸ್ತಾನೆ ಇದ್ದಾನೆ, ಅಪ್ಪ ಮಾತ್ರ ನನ್ ಮುದ್ದಿನ ಮಗಳು ಅಂದ್ಕೊಂಡು ನಾನ್ ಹೇಳಿದ್ದಕ್ಕೆಲ್ಲ ಕುಣಿತಾ ಇದ್ದಾರೆ. ನೀನ್ ಮಾತ್ರ ನಾನೊಬ್ಳು ಬದ್ಕಿದ್ದೀನಿ ಅನ್ನೋದು ಮರೆತು ಅದ್ಯಾವ ಕೋಟೆ ಗೆಲ್ಲೋಕ್ ಹೋಗಿದ್ಯೋ ಕೋತಿ?

ನಿನ್ನ ಪ್ರೀತೀಲಿ ಬೀಳಬಾರದು ಅಂತ ಎಷ್ಟೆಲ್ಲ ಕಷ್ಟಪಟ್ಟೆ ಗೊತ್ತಾ? ನೀನು ಹೇಳಿದ ಜಾಗಕ್ಕೆ ಬರಲಿಲ್ಲ, ನಿನ್ನ ಪತ್ರಗಳಿಗೆ ಉತ್ತರ ಬರೆಯಲಿಲ್ಲ, ಕಾಲೇಜಿಗೆ ಹೋಗುವಾಗ ಬಿಕ್ಷುಕನ ಹಾಗೆ ನಿಂತಿರುತ್ತಿದ್ದ ನಿನ್ನ ತಿರುಗಿ ಕೂಡ ನೋಡಲಿಲ್ಲ, ಆದರೆ ನೀನು ಮಾತ್ರ ಅಖಂಡ ತಪಸ್ವಿ, ನಿನಗೆ ಗೊತ್ತಿತ್ತಾ? ಒಂದಲ್ಲ ಒಂದು ದಿನ ಈ ಪುಳಿಚಾರು, ಚಿಕನ್ ಬಿರಿಯಾನಿಗೆ ಫೀದಾ ಆಗುತ್ತೆ ಅಂತ ? ಬರೊಬ್ಬರಿ ಐದು ವರ್ಷದ ಪ್ರಾಮಾಣಿಕ ಪ್ರೀತಿಗೆ ಫಿದಾ ಆಗದೆ ಹೇಗಿರಲಿ ಹೇಳು? ನಿನ್ನಲ್ಲಿ ಕಪಟವಿರಲಿಲ್ಲ, ವಂಚನೆಯಿರಲಿಲ್ಲ, ಸುಳ್ಳು ಇರಲಿಲ್ಲ, ನನಗಾಗಿ ಸುಳ್ಳೇ ಬದಲಾಗಲಿಲ್ಲ, ನೀನು ಹೇಗಿದ್ದೇಯೋ ಹಾಗೆ ಇದ್ದೆ. ಅದೇ ಪ್ರೀತಿಯನ್ನ, ಅದೇ ಅಂತರವನ್ನ, ಇವತ್ತಿಗೂ ಉಳಿಸಿಕೊಂಡು ಬಂದಿದ್ದೀಯಾ ಅಲ್ವಾ ಅದೇ ನನಗಿಷ್ಟವಾಗಿದ್ದು.

ಇನ್ನು ಮುಂದೆ ಮನೆ ಕೆಲ್ಸದವಳ ಹತ್ತಿರ ಕಾಗುಣಿತ ಸರಿ ಇಲ್ಲದ ನಿನ್ನ ಪ್ರೇಮ ಪತ್ರ ಕಳ್ಸೋದು ನಿಲ್ಸು ಮರಾಯ, ನಿನ್ನ ಕನ್ನಡ ನೋಡಿ ನನ್ನ ಕನ್ನಡ ಆತ್ಮಹತ್ಯೆ ಮಾಡ್ಕೊಳ್ಳುತ್ತೆ, ಸ್ವಲ್ಪ ಹುಡುಗಾಟ ಕಡ್ಮೆ ಮಾಡು, ಇಲ್ಲಿಯವರೆಗೆ ಹಿಂದೆ ಸುತ್ತಿದ್ದು, ಅತ್ತಿದ್ದು, ಬೇಡಿಕೊಂಡಿದ್ದು ಎಲ್ಲ ಮುಗಿದ ವಿಷಯ, ನಾನು ಬದುಕೋದಾದ್ರೆ ನಿನ್ನ ಜೊತೆ ಅಂತ ತೀರ್ಮಾನಿಸಿಯಾಗಿದೆ, ನನ್ನ ಚನ್ನಾಗಿ ನೋಡ್ಕೊತೀಯಾ ಅನ್ನೋ ನಂಬಿಕೆ ನನಗೂ ಬರಬೇಕಲ್ಲ ಹುಡುಗಾ? ಒಂದು ಸಣ್ಣ ಕೆಲ್ಸ, ಓಹೋ ಅನ್ನುವಷ್ಟಲ್ಲದಿದ್ರು ಓಕೆ ಅನ್ನುವಷ್ಟು ಸಂಬಳ, ಸೂಪರ್ ಅಲ್ಲದಿದ್ದರೂ ಸಾಧಾರಣ ಅನ್ನುವಂತ ಮನೆ, ಈಗ ಉಳಿಸಿಕೊಂಡಿದ್ದೀಯಲ್ಲ ಅದೇ ಪ್ರೀತಿಯನ್ನ ಜೀವನಪೂರ್ತಿ ನನಗೆ ಕೊಡ್ತೀನಿ ಅನ್ನೊ ಒಂದು ನಂಬಿಕೆ ಇಷ್ಟೆ ಸಾಕು ಕಣೊ ಈ ಹುಡುಗಿಗೆ. ಇನ್ನು ನಿನಗೇ ಪುಳಿಯೊಗರೆ ತಿನ್ನಿಸೋದ ಅಥವ ನಾನೆ ಬಿರಿಯಾನಿ ಮಾಡೋದ್ನ ಕಲಿಯೋದ ಅನ್ನೋದನ್ನ ಇಬ್ಬರು ಕುಳಿತು ಯೊಚಿಸೋಣ.

ನಿನ್ನ
ನವಿಲೂರ್ ಹುಡುಗಿ

ತುಂಬ ಸಂತೋಷವಾಗಿದ್ದೀನಿ ಅಂದುಕೊಂಡು ಬದುಕುತ್ತಿದ್ದೆ… ನೀನು ನೆನಪಾಗುವವರೆಗೆ !

25 ಆಗಸ್ಟ್

  ಕ್ಷಮೆ ಇರಲಿ ಗೆಳೆಯ ,

ಕ್ಷಮಿಸಲು ಅರ್ಹಳಲ್ಲದವಳು. ಕ್ಷಮೆ ಇರಲಿ ಗೆಳೆಯ ಅಂದರೆ ನಗುತ್ತೀಯ ಅಲ್ವಾ.. ಜನ ತಪ್ಪು ಮಾಡಿದ್ರೆ ಕ್ಷಮಿಸ್ತಾರೆ. ಆದ್ರೆ ನಾನು ಮಾಡಿದ್ದು ಪಾಪ. ಪಾಪಕ್ಕೆ ಕ್ಷಮೆ ಇಲ್ಲ. ಹಿಂದೆ ಸುತ್ತಿದ್ದು ನಾನು, ಪ್ರೀತಿಸು ಅಂತ ಬೇಡಿಕೊಂಡಿದ್ದು ನಾನು. ನಿನ್ನ ಜೊತೆ ಇರ‍್ತಿನಿ ಅಂತ ಅರ್ಥವಿಲ್ಲದೇ ಇರುವ ಆಣೆ ಪ್ರಮಾಣಗಳನ್ನು ಮಾಡಿದ್ದು ನಾನು. ಯಾವತ್ತೂ ಕಣ್ಣೀರಾಗದವಳು ನಿನಗೋಸ್ಕರ ಕಂಗಳ ಅಣೆಕಟ್ಟು ಒಡೆಯುವಂತೆ ಅತ್ತವಳು ನಾನು. ಸುಳ್ಳಾಡದವಳು ದೇವರಂಥ ಅಮ್ಮನ ಮುಂದೆ ಕೇವಲ ನಿನಗೋಸ್ಕರ ಸುಳ್ಳಾಡಿದವಳು ನಾನು.. ನಿಜ ಹೇಳ್ತೀನಿ ಕಣೋ. ಪ್ರೀತಿಸಿದಷ್ಟು ದಿನ ದೇವರ ಹಾಗೆ ನಿನ್ನ ಪ್ರೀತಿಸಿದ್ದು ಆ ದೇವರಷ್ಟೇ ನಿಜ, ಅಮ್ಮನಷ್ಟೇ ನಿಜ ಅವನು ಬರುವವರೆಗೆ…

ಕೇವಲ ಹಣ, ಅಂತಸ್ತು, ರೂಪಕ್ಕೆ ನಿಜವಾದ ಪ್ರೀತಿಯನ್ನು ಮಾರಿಕೊಳ್ಳುವ ನನ್ನಂಥವರಿಗೆ ಆ ದೇವರು ಸಾವು ಯಾಕೆ ತರಲಿಲ್ಲ ಗೆಳೆಯ? ದೇವರಂಥ ನಿನಗೆ ದ್ರೋಹ ಮಾಡುವ ಮುನ್ನ ಆ ದೇವರು ಯಾಕೆ ತಡೆಯಲಿಲ್ಲ? ಮೂರು ವರ್ಷದ ಪ್ರೇಮವನ್ನು ಕೇವಲ ಆರೆಣಿಕೆ ಸಂಬಳದ ಹುಡುಗನ ಮನೆ ಕಾರು ಕೊಲ್ಲುತ್ತೆ ಅಂದ್ರೆ ಎಂತಹ ದುರ್ಬಲ ಮನಸ್ಸಿನ ಹುಡುಗಿಯನ್ನು ಪ್ರೀತಿಸಿದೆಯೋ ನೀನು. ಸಾವಿನ ಮುಂದೆ ಕೈಯೊಡ್ಡಿ ನಿಂತಿದ್ದೀನಿ. ನನ್ನ ಹಾಗೆ ಸಾವಿಗೂ ಕರುಣೆ ಇಲ್ಲ. ನಿನ್ನ ನೆನಪು ಮಾಡಿಕೊಳ್ಳಲಿಕ್ಕೆ ಅರ್ಹತೆ ಇಲ್ಲದವಳು ಬರೆದ ಈ ಪತ್ರವನ್ನು ನೀನು ಓದುತ್ತೀಯ ಅಲ್ವಾ.. ನೀನು ಓದಲೇಬೇಕು ಕಣೋ. ನಿನ್ನ ಮುಂದೆ ನಿಂತು ನಿನ್ನ ಹೆಸರು ಹೇಳಲೂ ಅರ್ಹತೆ ಕಳೆದುಕೊಂಡವಳು ನಿನಗೆ ಬರೆಯುತ್ತಿರುವ ಕೊನೆಯ ಪತ್ರ ಇದಾದರೂ ಆಗಬಹುದು.

ನಾನು ತುಂ ಸಂತೋಷವಾಗಿದ್ದೀನಿ(?) ಗೆಳೆಯ. ಕೊಟಿಗಳೂ ಕೂಡ ಲೆಕ್ಕ ತಪ್ಪುವ ಗಂಡನಿದ್ದಾನೆ. “ರಾತ್ರಿ” ಮಾತ್ರ ತುಂಬ ಪ್ರೀತಿಸುತ್ತಾನೆ. ಕೈಗೊಬ್ಬ ಕಾಲ್ಗೊಬ್ಬ ಆಳು. ಲಕ್ಷ್ಮಿ ಕಾಲು ಮುರಿದುಕೊಂಡು ನನ್ನ ಮುಂದೆ ಬಿದ್ದಿದ್ದಾಳೆ. ಹೆಸರು ಕುಲ ಗೋತ್ರ ಗೊತ್ತಿಲ್ಲದ ಕಾರುಗಳಲ್ಲೇ ದಿನಾ ಓಡಾಡ್ತೀನಿ. ದಿನಕ್ಕೆ ಲಕ್ಷಾಂತರ ರುಪಾಯಿಗಳಷ್ಟು ಷಾಪಿಂಗ್. ಕ್ರೆಡಿಟ್ ಕಾರ್ಡ್‌ಗಳಲ್ಲೇ ವ್ಯವಹಾರ. ನನಗೆ ಪ್ರೀತಿ ಬೇಕು ಅನಿಸಿದಾಗಲೆಲ್ಲ ಅದೆಲ್ಲಿಂದಲೋ ದುಡ್ಡು ತಂದು ಸುರಿಯುತ್ತಾನೆ. ಬಡತನವನ್ನೆಲ್ಲ ಸಿರಿವಂತ ಗಂಡನ ತೋಳ ತೆಕ್ಕೆಯಲ್ಲಿ, ಅವನ ಹಣದ ಕಟ್ಟುಗಳ ಕೆಳಗೆ ತುಳಿದು ಹಾಕುತ್ತಿದ್ದೀನಿ. ತುಂಬ ಸಂತೋಷವಾಗಿದ್ದೀನಿ ಅಂದುಕೊಂಡು ಬದುಕುತ್ತಿದ್ದೆ ನೀನು ನೆನಪಾಗುವವರೆಗೆ.

ಬದುಕು ಅಂದರೆ ಕೇವಲ ದುಡ್ಡಲ್ಲ ಅಂತ ಗೊತ್ತಾಗಲಿಕ್ಕೆ ತುಂಬ ಸಮಯ ಬೇಕಾಗಲಿಲ್ಲ. ಗಂಡ ಅನ್ನಿಸಿಕೊಂಡವನು ರಾತ್ರಿ ಮಾತ್ರ ಪ್ರೀತಿಸುವಾಗ ಯಾಕೋ ನೀನು ನೆನಪಾಗುತ್ತಿದ್ದೆ. ನೀನು ಪ್ರೀತಿಸುದಷ್ಟು ದಿನ ಅಮ್ಮನ ನೆನಪೇ ಆಗದಷ್ಟು ಪ್ರೀತಿಸಿದವನು ನೀನು. ನಾನೇ ಹದ್ದುಮೀರಿ ನಡೆದುಕೊಂಡರೂ ಸಂಯಮದ ಪಾಟ ಕಲಿಸುತ್ತಿದ್ದವನು ನೀನು. ನಿನ್ನ ದೂರ ಮಾಡಿಕೊಂಡು ಕೋಟಿ ಬಂಗಲೆಯೊಳಗೆ ಬಂದಮೇಲೆ ನಿನ್ನ ನೆನಪಾಗಲಿಕ್ಕೆ ತುಂಬ ದಿನ ಬೇಕಾಗಲಿಲ್ಲ. ದುಡ್ಡು ಮಾತ್ರ ಸುಖ ತರುವುದಿಲ್ಲ ಅನ್ನುವ ಸತ್ಯ ನನ್ನಂಥ ಹುಡುಗಿಯರಿಗೆ ನಿನ್ನಂಥ ಹುಡುಗರನ್ನು ಕಳೆದುಕೊಂಡ ಮೇಲೆಯೇ ಗೊತ್ತಾಗಬೇಕು. ಹೇಗಿದ್ದೀಯೋ ಎಲ್ಲಿದ್ದೀಯೊ ಅನ್ನುವುದು ಗೊತ್ತಾಗದೇ ಈ ಪತ್ರ ಬರೆಯುತ್ತಿದ್ದೀನಿ. ಪತ್ರ ಓದಿ ಅಸಹ್ಯ ಪಟ್ಟುಕೊಳ್ಳಬೇಡ ಪ್ಲೀಸ್. ಪ್ರತಿ ಸಲ ತಪ್ಪು ಮಾಡಿದಾಗಲೂ ಕ್ಷಮಿಸುತ್ತಿದ್ದ ಹಾಗೆ ಕೊನೆಯ ಸಲ ಕ್ಷಮಿಸಿಬಿಡು. ಸರಿ, ಅವನು ಬರುವ ಹೊತ್ತಾಯ್ತು. ರಾತ್ರಿ ತುಂಬ ಪ್ರೀತಿಸುತ್ತಾನೆ. ಅವನು ಪ್ರೀತಿಸುವಾಗ ನನ್ನ ಕಣ್ಣಲ್ಲಿ ನೀರಿರುತ್ತೆ. ಅಲ್ಲಿ ನೀನಿರುತ್ತೀಯ.

ಕ್ಷಮೆ ಇರಲಿ ಗೆಳೆಯ

ನಿನ್ನ ಚೋಮಿ..:(

 

ಜೋಗಯ್ಯನಿಗೆ ಜೋಳಿಗೆ ಯಾವತ್ತೂ ಭಾರವಲ್ಲ !

10 ಮೇ

ಮನುಷ್ಯ ಸಹಜ ಬದುಕಿನಿಂದ ತುಂಬಾನೆ ದೂರವಿದ್ದ ನನ್ನನ್ನ ಬದುಕಿನ ತೇರ ದಾರಿಗೆ ಕರೆದುಕೊಂಡು ಬಂದ ದೇವತೆ ನೀನು.. ನಿನ್ನನ್ನ ಆತ್ಮಬಂಧುವೆಂದು ಹೆಸರಿಡದೇ ಬೇರೆ ಯಾವ ಹೆಸರಿಡಲಿ ಹೇಳು?. ಕತ್ತಲ ಪ್ರಪಂಚದ ಯಾವುದೋ ಮೂಲೆಯಲ್ಲಿದ್ದ ನನ್ನನ್ನ ಬೆಳಕಿನ ದಾರಿಗೆ ಕೈ ಹಿಡಿದ ನನ್ನ ಬದುಕಿನ ಪುಟ್ಟ ಹಣತೆ ನೀನು . ನೀನು ಕೊಡುವ ಇಷ್ಟಿಷ್ಟೇ ಬೆಳಕಿನಲ್ಲಿ ನನ್ನ ಈ ಪೂರ್ತಿ ಬದುಕನ್ನ ಕಾಣ ಹೊರಟ ನಿನ್ನ ಬದುಕಿನ ನಾವಿಕ ನಾನು. ನಿನ್ನ ಕುರಿತಾದ ಪ್ರತಿ ಕನಸುಗಳನ್ನು ಆಕಾಶದೆತ್ತರಕ್ಕೇ ಹೋಲಿಸಿ ಸಂಭ್ರಮಿಸಿದ್ದು ಸುಳ್ಳಲ್ಲ, ಆದರೆ ಅದೇ ಪ್ರೀತಿಯಲ್ಲಿ ಆಕಾಶದ ಅಗಾಧತೆಗೂ ಮಿಗಿಲಾದ ನೋವು ಇದ್ದೀತೆಂದು

ಪ್ರಾಮಿಸ್ ನಿನ್ನಾಣೆ ನನಗೆ ಗೊತ್ತಿಲ್ಲ.

ಹುಟ್ಟುತ್ತಲೆ ಎಲ್ಲರನ್ನು ಮತ್ತು ಎಲ್ಲವನ್ನೂ ಕಳೆದುಕೊಂಡು ಈ ಜಗತ್ತಿಗೆ ಖಾಲಿ ಜೇಬಿನ ಪಕೀರನಾಗಿ ಬಂದವನು ನಾನು . ಜೊತೆಗೆ ಈ ಜಗತ್ತಿಗೆಲ್ಲ ಹರಿದು ಹಂಚಿದರೂ ಖಾಲಿಯಾಗದಷ್ಟು ನೋವು, ದುಃಖ, ಹತಾಷೆ, ಒಬ್ಬಂಟಿತನಗಳನ್ನೆಲ್ಲ ಒಡಲಲ್ಲಿಟ್ಟುಕೊಂಡೇ ಬೆಳೆದು ಬಂದ ಮಾಮೂಲಿ ಹುಡುಗ ನಾನು. ಆದರೇ ನನ್ನ ಪಾಲಿಗೆ ಯಾವತ್ತೂ ಇಲ್ಲದಿದ್ದ ಆ ದೇವರು, ಕೆಲ ಸಮಯದಲ್ಲಿ ಕರುಣಾಳುವಾಗಿರುತ್ತಾನೆ ಎಂಬ ಮಾತಿಗೆ ಸಾಕ್ಷಿಯಂತೆ ನನಗೆ ನಿನ್ನ ತೋರಿಸಿಬಿಟ್ಟ . ಖಾಲಿಯಾಗಿದ್ದ ಬದುಕಿನ ಬಟ್ಟಲುಗಳೆಲ್ಲ ಒಮ್ಮೆಲೆ ತುಂಬಿದ ಹಾಗಾಯಿತು. ತಂದೆ ತಾಯಿಯ ಮುಖವನ್ನೇ ನೋಡಿರದಿದ್ದ ಈ ಹುಡುಗನಿಗೆ ಎಲ್ಲಾ ತಂದೆ ತಾಯಿಚಿiರು ಒಟ್ಟಿಗೆ ಜೋಗುಳ ಹಾಡಿದ ಅನುಭವವಾಗಿದ್ದು ಸುಳ್ಳಲ್ಲ .

ನಿನ್ನ ಮಡಿಲಲ್ಲಿ ಎಲ್ಲ ನೋವುಗಳನ್ನ ಮರೆಸುವಂತ ಮಮತೆ ಅದೆಷ್ಟಿತ್ತು ?. ಒಂದಕ್ಷರಗನ್ನೂ ಬರೆಯದಿದ್ದ ಈ ಬದುಕಿನ ಪುಟಗಳಲ್ಲಿ ನೀನು ಬಂದ ಮೇಲೆ ಮೂಡಿದ್ದು ಬರಿ ಸುವರ್ಣಾಕ್ಷರಗಳೆ ಅಲ್ಲವೆ? ಆದರೆ ಭಯವಾಗುತ್ತಿದೆ, ಬದುಕಿನ ಪುಟಗಳಲ್ಲಿ ಜೋಗುಳ ಹಾಡುತ್ತಿದ್ದ ಪ್ರತಿ ಅಕ್ಷರಗಳು ಯಾವುದೋ ನೋವಿನ ಗೀತೆಗೆ ಸಾಲುಗಳಾಗುತ್ತಿವೆ. ಬದುಕಿನುದ್ದಕ್ಕೂ ನೋವನ್ನ ಜೊತೆಗಿಟ್ಟುಕೊಂಡೇ ಬಲವಂತದ ನಗು ಬಗಲಿಟ್ಟುಕೊಂಡು ಸಾಗುತ್ತಿರೋನು ನಾನು. ಆ ಜೋಳಿಗೆಗೆ ಇನ್ನೊಂದಷ್ಟು ನೋವಿನ ಭಿಕ್ಷೆಯನ್ನ ತುಂಬಿಸಿದ್ದೀಯ.ಜೋಗಯ್ಯನಿಗೆ ಜೋಳಿಗೆ ಯಾವತ್ತೂ ಭಾರ ಆಗೋದಿಲ್ಲ..:(

ಪತ್ರದ ಜೊತೆ ಒಂದೆರೆಡು ಮುತ್ತುಗಳಿರಲಿ

27 ಏಪ್ರಿಲ್

ಸಂಪಿಗೆ ಮೂಗಿನ ಹಸಿರು ದಾವಣಿಯ ನನ್ನ ಅಂತರಂಗದ ಗೆಳತಿಗೆ ನಿನ್ನ ಪ್ರೇಮದ ಗೆಳೆಯ ಕೊಡುವ ಮತ್ತು ಬೇಡುವ ಸಿಹಿ ಸಿಹಿ ಮುತ್ತುಗಳು. ನಾನು ಕ್ಷೇಮ ನೀನು ಕ್ಷೇಮವೆಂದು ನಿನ್ನ ಪತ್ರದಿಂದ ತಿಳಿಯಿತು, ತಿಳಿಸುವುದೇನೆಂದರೆ, ನಾನು ನಿನ್ನಂತರಂಗದ ಒಲವಿನ ನೆನಪುಗಳಲ್ಲಿ ಸದಾ ಖುಷಿಯಾಗಿದ್ದೆ, ಖುಷಿಯಾಗಿದ್ದೇನೆ ಮತ್ತು ಖುಷಿಯಾಗಿರುತ್ತೇನೆ. ಮತ್ತೆ ನೀನು ಹೇಗಿದ್ದೀಯಾ? mooಗಿನ ತುದಿಯಲ್ಲಿ ಮೊದಲಿನಂತೆ ಕೊಪದ ಜ್ವಾಲಾಮುಖಿ ಆಗಾಗ ಚಿಮ್ಮುತ್ತಿದೆಯೇ? ನಿನ್ನ ಮಲ್ಲಿಗೆ ಜಡೆ ಈಗಲೂ ನಿನ್ನ ಮನೆಯ ಅಂಗಳದ ಅಂಚನ್ನು ಇಷ್ಟಿಷ್ಟೇ ತಾಕುತ್ತಿದೆಯೇ? ನಿನ್ನ ತುಟಿಗಳಲ್ಲಿರುವ ನನ್ನ ನಗು ಸ್ವಲ್ಪವೂ ಮಾಸಿಲ್ಲ ತಾನೆ? ನನ್ನ ಹೆಸರಿನ ನಿನ್ನ ಕೊಟ್ಟಿಗೆಯ ಕರುವನ್ನ ದಿನಕ್ಕೆಷ್ಟು ಬಾರಿ ಮುದ್ದಾಡಿ ಬರುತ್ತೀ ಮುದ್ದುಗಿಣಿ? ನೀನು ರಾತ್ರಿಪುರ ತಬ್ಬಿ ಮಲಗುವ ಬೆಕ್ಕಿನ ಮುದ್ದುಮರಿಗೆ ನನ್ನ ಹೆಸರಿಟ್ಟ ಔಚಿತ್ಯವೇನೆಂದು ಪ್ರಶ್ನಿಸಬಹುದೇ? ಪಿತೃ ಸಮಾನರಾದ ನಿಮ್ಮ ತಂದೆಯವರಿಗೆ ವಾಸುವಿನ ಒಲವನ್ನ ತಿಳಿಸುವ ಘಳಿಗೆಯನ್ನ ಪಕ್ಕದ ಮನೆಯ ಸುಬ್ರಾಯ ಭಟ್ಟರನ್ನ ಕೇಳಿ ಆಯಿತೆ? ಮನೆ ಮುಂದಿನ ಗೋರಂಟೀ ಗಿಡಕ್ಕೆ ನನ್ನ ನಮಸ್ಕಾರವನ್ನ ಹಿಂದಿನ ಪತ್ರದಲ್ಲೆ ತಿಳಿಸಿದ್ದೆ ಅದಕ್ಕೆ ತಲುಪಿಸಿದೆಯಾ? ನನ್ನ ಕೈಗಳಿಂದ ನಿನ್ನ ಮುದ್ದಾದ ಕೈಗೆ ಬಣ್ಣ ತುಂಬಿದ ಮುದ್ದಾದ ಗಿಡ ಅದು. ಅದಕ್ಕೆ ನನ್ನ ನಮಸ್ಕಾರಗಳು ಸಂದಾಯವಾಗಲೇ ಬೇಕು ಅದಕ್ಕಾಗಿ ಮತ್ತೊಮ್ಮೆ ನೆನಪಿಸುತ್ತಿದ್ದೇನೆ.

ನನ್ನ ಟ್ರಂಕ್ ಕಾಲ್ ಗೆ ನೀನು ತೋಟದ ಮನೆಯ ಮಾರಪ್ಪಣ್ಣನ ಮನೆಗೆ ರಾತ್ರಿ ಓಡಿ ಬರುವಾಗ ಜಾರಿ ಬಿದ್ದು ಮಂಡಿ ತರಚಿಸಿಕೊಂಡಿರುವುದು ತಿಳಿಸಿದ್ದೆ ವಿಷಯ ತಿಳಿದು ನನಗೇ ನೋವಾದಷ್ಟು ನೋವಾಯಿತು. ಈಗ ಆ ಪೋನು ಹಾಳಾಗಿದೆ ಎಂದು ತಿಳಿದು ತುಂಬಾ ಕುಷಿಯಾಯಿತು. ಮಂಡಿ ತರಚಿಕೊಂಡಾಗ ತ್ಯಾಂಪಣ್ಣನ ನೋವಿನೆಣ್ಣೆಯನ್ನು ಹಚ್ಚಿ ಬಿಸಿ ನೀರು ಹಾಕುತ್ತಿದ್ದೆ ಹಾಗೆ ಕದ್ದು ಒಂದು ಮುತ್ತು ಕೂಡ(ಮುಖ ತಿರುಗಿಸ ಬಾರದು)

ದೇವಕಿ ನನಗೀಗಲು ರತ್ನಮ್ಮನ ಹೋಟೇಲಿನ ಪಡ್ಡು ತಿನ್ನುವ ಆಸೆಯಾಗುತ್ತಿದೆ ಖಾರದ್ದು ಮತ್ತು ಸಿಹಿಯದ್ದು, ಸಿಹಿನೇ ಇಷ್ಟ ನೀನು ಕಚ್ಚಿ ಕೊಡ್ತಿದ್ಯಲ್ಲ ಅದು ಇನ್ನು ಇಷ್ಟ…… ಏನು ಮಾಡಲಿ? ಸೊಂಪಾಗಿ ಬೆಳೆದ ಜಾರಿಗೆ ಮರದಲ್ಲಿ ಇಬ್ಬರು ಹತ್ತಿ ಕುಳಿತು ಅರ್ಧ ದಿನ ಕಳೆದದ್ದು ಈಗಲು ನಗು ತರಿಸುತ್ತಿದೆ, ನೀನು ಬರೆಯುವ ಮುಂದಿನ ಪತ್ರದಲ್ಲಿ ಉತ್ತರದ ಸಮೇತ ನಿನ್ನ ಮಲ್ಲಿಗೆಯ ನಗುವನ್ನ ರವಾನೆ ಮಾಡತಕ್ಕದ್ದು, ನೀನು ಇಷ್ಯೀ ಥೂ ಕೊಳಕಾ…ಅಂದರೂ ಚಿಂತೆಯಿಲ್ಲ ಪತ್ರದ ಜೊತೆ ಒಂದೆರೆಡು ಮುತ್ತುಗಳಿರಲಿ, ಎರಡು ಬೇಕು, ಮೂರು ಸಾಕು ಅನ್ನುವ ಒಪ್ಪಂದದಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ ಹಾಗೂ ನಮಗೆ ಗಂಡು ಮಗುವಾದರೇ ಭೀಮಸೇನ ಅಂತಲೂ ಹೆಣ್ಣುಮಗುವಾದರೇ ಹೇಮಾವತಿ ಅಂತಲೂ ಹೆಸರಿಡುವ ನಿನ್ನ ಜೊತೆಗಿನ ನನ್ನ ಜನ್ಮ ಸಿದ್ಧ ಹೋರಾಟದಂತಹ ಮಾತಿನಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ. ಹಾಗು ನಿಮ್ಮ ತಂದೆಯವರು ನಮ್ಮ ಮದುವೆಗೆ ಒಪ್ಪಿಗೆ ಸೂಚಿಸಲಿ ಎಂದು ಹನುಮಂತ ದೇವರ ಗುಡಿಗೆ ಹೋಗಿ ಪೂಜೆ ಮಾಡಿಸಿಕೊಂಡು ಬರತಕ್ಕದ್ದು, ಪೂಜೆ ಮಾಡಿಸಿಕೊಂಡು ಬಂದ ಕುಂಕುಮ, ವಿಬೂತಿ, ಮತ್ತು ಸ್ವಲ್ಪ ಅಕ್ಕಿಕಾಳುಗಳನ್ನ ಪತ್ರದ ಜೊತೆ ಕಳುಹಿಸತಕ್ಕದ್ದು. ಮತ್ತು ಪತ್ರದ ಮೊದಲಿಗೆ ಪ್ರೀತಿಯ ಪತಿದೇವರಿಗೆ ಪ್ರೀತಿಯ ಸವಿಮುತ್ತುಗಳು ಎಂಬ ಒಕ್ಕಣೆಯನ್ನ ಕಡ್ಡಾಯವಾಗಿ ನಮೂದಿಸತಕ್ಕದ್ದು.

ಆದಷ್ಟು ಬೇಗ ನಿನ್ನನ್ನು ಬಂದು ಸೇರಿಕೊಳ್ಳುತ್ತೇನೆ. ಗೋರಂಟೀ ಗಿಡದ ಹಳೆಯ ಬಾಕಿಗಳನ್ನೆಲ್ಲ ತೀರಿಸಿಬಿಡುತ್ತೇನೆ ಕೊಳಕ ಇಷ್ಯೀ.. ಅನ್ನುತ್ತ ನೀನು ಮಾರುದ್ದ ದೂರ ಹೋಗಿ ಮಲ್ಲಿಗೆ ಗಿಡದ ಬಳಿ ನಿಲ್ಲುವುದನ್ನು ಇಲ್ಲಿಯೇ ಕುಳಿತು ಕಲ್ಪಿಸಿಕೊಂಡು ಮತ್ತಷ್ಟು ನಿನ್ನನ್ನ ಕಾಡಬೇಕೆಂದು ಮನಸ್ಸಿನಲ್ಲೆ ಅಂದುಕೊಳ್ಳುತ್ತಿದ್ದೇನೆ. ಕೇವಲ ನಿನ್ನ ಪಡೆಯೋದಕ್ಕೋಸ್ಕರ ಈ ಡಾಲರುಗಳ ಊರಿನಲ್ಲಿ ಬಂದು ಕೆಲವೊಮ್ಮೆ ನಿನ್ನ ನೆನಪಾಗಿ ಬಿಕ್ಕಳಿಸುತ್ತೇನೆ..ಆದಷ್ಟು ಬೇಗ ನಿನ್ನನ್ನ ಸೇರುತ್ತೇನೆಂಬ ವಿಶ್ವಾಸ ಎಲ್ಲಾ ವಿರಹಗಳನ್ನೆಲ್ಲ ದೂರ ಮಾಡುತ್ತಿದೆ. ಬರಿಯೊದಕ್ಕೆ ತುಂಬಾ ಇದೆ ಈಗಾಗಲೆ ಮನಸ್ಸು ನಿನ್ನ ಪತ್ರದ ನಿರಿಕ್ಷೆಯ ಬೆನ್ನು ಹತ್ತಿ ಕುಳಿತಿದೆ. ಸದ್ಯಕ್ಕೆ ಪತ್ರ ಮುಗಿಸುತ್ತಿದ್ದೇನೆ.. ಆದಷ್ಟು ಬೇಗನೇ ಪತ್ರ ಬರೆಯತಕ್ಕದ್ದು. ಬೇರೇನು ವಿಶೇಷವಿಲ್ಲ ಇದ್ದರೆ ನಿನ್ನ ಪತ್ರ ನೋಡಿ ಬರೆಯುತ್ತೆನೆ..:)

ಪ್ರತಿ ಪತ್ರಗಳು ಕೊನೆಕೊನೆಗೆ ಕಣ್ಣೀರಿನಿಂದ ತೊಯ್ದು ಅಕ್ಷರಗಳೇ ಕಾಣದಾಗುತ್ತವೆ.

27 ಏಪ್ರಿಲ್

ಪ್ರೀತಿಯಲ್ಲಿ ಹೇಳಿಕೊಂಡಿದ್ದನ್ನ ಮತ್ತು ಹೇಳಿಕೊಳ್ಳಲಾಗದೇ ಇದ್ದಿದ್ದನ್ನ ಒಂದು ತಕ್ಕಡಿಯಲ್ಲಿ ಹಾಕಿ ತೂಗಿದರೆ ಹೇಳಿಕೊಳ್ಳಲಾಗದ್ದೇ ಹೆಚ್ಚು ತೂಗುತ್ತಂತೆ ನಿಜವಾ? ಬಹುಶ ಈ ಪತ್ರವನ್ನ ಓದಿದ ಮೇಲೆ ನಿನಗೆ ನನ್ನ ಮಾತು ನಿಜವನ್ನಿಸಿದರೂ ಅನ್ನಿಸಬಹುದು. ಅಥವ ಇವನೊಬ್ಬ ಸುಳ್ಳ ಅಂತನೂ ಅನ್ನಿಸಿ ಪತ್ರವನ್ನ ಹರಿದೆಸೆದು ನಿರ್ಲಪ್ತತೆಯಿಂದ ಸುಮ್ಮನಿದ್ದುಬಿಡಬಹುದು. ನಿಜ ದೇವಕಿ, ನಿನ್ನ ಮುಂದೆ ಇಲ್ಲಿಯವರೆಗೂ ಹೇಳಲಾರದ ಸಣ್ಣ ಸಣ್ಣ ಸಂಗತಿಗಳು ತುಂಬಾನೆ ಇವೆ. ಸಣ್ಣ ಸಂಗತಿಗಳಾದರೂ ಅದರಲ್ಲಿ ತುಂಬು ಪ್ರೀತಿಯ ಸಾರ್ಥಕತೆ ಇದೆ. ನಿಜವಾದ ಪ್ರೇಮಿಗಳಿಗೆ ಸಣ್ಣ ಸಣ್ಣ ಸಂಗತಿಗಳೂ ಕೂಡ ಬೆಟ್ಟದಷ್ಟು ದೊಡ್ಡದಾದ ನೆಮ್ಮದಿಯನ್ನ ಕೊಡುತ್ತವಂತೆ.

ನಿಜ ಹೇಳ್ತ ಇದ್ದೀನಿ ಕೆಲವೊಮ್ಮೆ ನಿನ್ನ ಹಣೆಗೊಂದು ಮುತ್ತು ಕೊಡಬೇಕೆನ್ನಿಸುತ್ತಿತ್ತು. ಅವಕಾಶ ಸಿಕ್ಕಿದಾಗಲೆಲ್ಲ ನಿನ್ನನ್ನ ಯಾವತ್ತೂ ದೂರಾಗದ ಹಾಗೆ ಗಟ್ಟಿಯಾಗಿ ತಬ್ಬಿಹಿಡಿದು ಕುಳಿತುಬಿಡಬೇಕು ಅನ್ನಿಸುತ್ತಿತ್ತು. ನೂರಾರು ಕಿಲೋಮೀಟರುಗಳ ದೂರವನ್ನ ಒಂದೇ ಒಂದು ಮಾತನಾಡದೆ ನಿನ್ನ ಕಿರುಬೆರಳ ಹಿಡಿದು ನಡೆಯಬೇಕೆನ್ನಿಸುತ್ತಿತ್ತು. ಸುರಿವ ಸ್ವಾತಿ ಮಳೆಯಲ್ಲಿ ನಾನೆ ನಿನ್ನ ಭುಜಕ್ಕೊರಗಿಕೊಂಡು ಪ್ರೇಮಕವಿ ಕೆ.ಎಸ್.ಎನ್ ಅವರ ಒಂದು ಪೂರ್ತಿ ಕವಿತೆಯನ್ನ ನಿನಗೆ ಓದಿಹೇಳಬೇಕೆನ್ನಿಸಿದ್ದು ಸುಳ್ಳಲ್ಲ. ಇದ್ದಕ್ಕಿದ್ದಂತೆ ಕಣ್ಮುಚ್ಚಿ ಉಸಿರು ಕಟ್ಟಿದ ಹಾಗೆ ನಾಟಕವಾಡಿ ನೀನು ಗಾಬರಿ ಬೀಳೋದನ್ನ ಕದ್ದು ನೋಡಿ ನೀನೆಷ್ಟು ಪ್ರೀತಿಸುತ್ತಿಯ ಎಂದು ನಿನ್ನ ಕಿವಿಯಲ್ಲಿ ಹೇಳಿ ಕಣ್ಣು ತುಂಬಿಕೊಳ್ಳಬೇಕೆನ್ನಿಸುತ್ತಿತ್ತು. ದೇವರ ಸನ್ನಿಧಿಯಲ್ಲಿ 3 ಸುತ್ತಿನ ಬದಲು ಮೂವತ್ಮೂರು ಸುತ್ತುಗಳನ್ನ ನಿನ್ನನ್ನ ಹೊತ್ತು ತಿರುಗಿಸಬೇಕೆನ್ನಿಸುತ್ತಿತ್ತು. ಸನಿಹವಿದ್ದಾಗ ನಿನ್ನ ಪ್ರೀತಿಯನ್ನ ದೂರವಿದ್ದಾಗ ನಿನ್ನ ವಿರಹವನ್ನ ಮನಸಾರೆ ಅನುಭವಿಸುವ ಆಸೆಯಾಗುತ್ತಿತ್ತು.

ಹೇಳೋಕೆ ತುಂಬಾನೆ ಇದೆ ದೇವಕಿ. ಕೆಲವು ಕಾರಣಗಳು ನಿನಗೆ ಸಿಲ್ಲಿ ಅನ್ನಿಸಬಹುದು. ಆದರೇ ಕೇವಲ ಭಾವನೆಗಳಲ್ಲೆ ಬದುಕುವ ನನ್ನಂತವರ ಪಾಲಿಗೆ ಈ ಸಣ್ಣ ವಿಷಯಗಳು ಸಣ್ಣ ವಿಷಯಗಳೇನು ಅಲ್ಲ. ಹೀಗೆ ನಿನ್ನ ಬಗ್ಗೆ ಏನೇ ಬರೆದರೂ ಅದು ಯಾಕೋ ಪ್ರೀತಿಯಲ್ಲೇ ಮುಕ್ತಾಯವಾಗುತ್ತದೆ. ಪ್ರತಿ ಪತ್ರಗಳು ಕೊನೆಕೊನೆಗೆ ಕಣ್ಣೀರಿನಿಂದ ತೊಯ್ದು ಅಕ್ಷರಗಳೇ ಕಾಣದಾಗುತ್ತವೆ. ಈ ಅಸಹಾಯಕತೆಗೆ ಏನನ್ನಲಿ?

ಹೆಜ್ಜೆಗಳು ಕೇಳಿದ ಪ್ರಶ್ನೆಗೆ ಉತ್ತರಿಸದವನು !

4 ಫೆಬ್ರ

ಈ ಎದೆಯೊಳಗಿನಿಂದ
ಜಾರಿ ಬೀಳುತ್ತಿರುವ
ಒಂದೊಂದು ನೆನಪುಗಳಿಗೂ
ಕಾಲಿಗೆ ಬಿದ್ದವನು..!

ಆತ್ಮಸಾಕ್ಷಿಗೆ ಪೆಟ್ಟಾಯಿತೆಂದು
ಮತ್ತೆ ಎದ್ದು ನಿಂತು
ಬಲವಂತದ ನಗು ಮೊಗ ಹೊತ್ತವನು..!

ಮತ್ತೆ ಉತ್ತರಿಸಿಕೊಂಡು
ಬಂದ ನಿನ್ನ ನೆನಪುಗಳಿಗೆ
ಶರಣಾಗಿ ಸೋತೆನೆಂದವನು..!

ನೀನು ಮಾಡಿದ ಎಲ್ಲಾ
ಗಾಯಗಳಿಗೂ ನಿನ್ನ ಪ್ರೀತಿಯ
ಮುಲಾಮು ಹಚ್ಚಿದವನು,
ಮತ್ತೆ ಎಲ್ಲ ಗಾಯಗಳಿಗೂ
ನನ್ನ ಗೆಳತಿಯ ಮಚ್ಚೆಗಳೆಂದು
ಹೊಸ ಹೆಸರನಿಟ್ಟವನು..!

ಜೊತೆ ನಡೆದ ೩
ಹೆಜ್ಜೆಗಳನ್ನೆ ೩
ಜನ್ಮಗಳು ಅಂದುಕೊಂಡವನು.
ನೀನಿಲ್ಲದೇ ಒಂಟಿಯಾದ
ಈ ಹೆಜ್ಜೆಗಳು ನಿನ್ನ ಕುರಿತಾಗಿ
ಕೇಳಿದ ಪ್ರಶ್ನೆಗಳಿಗೆ
ಉತ್ತರಿಸಲಾಗದೇ ಸೋತವನು