ಕವಿತೆಯ ಕೊನೆಯ
ಸಾಲಿನ ಬಳಿಕ,
ಸಂಜೆ ಕತ್ತಲಿನ ಕೊನೆಗೆ
ಮಾತುಗಳೆಲ್ಲ ಮುಗಿದ ನಂತರ
ಎಲ್ಲರ ಹಾರೈಕೆಗಳೂ ತೀರಿದ ತಕ್ಷಣ
ನೆನಪಾಗು.. ಬದುಕು ಮುಂದುವರಿಯಬೇಕು.
———————————————
ಮುಳುಗಲಿ ಜಗತ್ತು
ತೊಲಗಿ ಹೋಗಲಿ ಬೆಳಕು
ಆರಲಿ ಬಿಡು ದೀಪ
ನಾಶವಾಗಿ ಹೋಗಲಿ ಸುಖ ಸಂತೋಷ
ನಾನು ನಿನ್ನ ಮಡಿಲಲ್ಲಿರುವೆ.
——————————————————
ಅಲ್ಲಿ ಹರಿದ ತಾಯ ಸೆರಗಿತ್ತು
ಅಲ್ಲಿ ಅವಳ ಬಿರಿದ ಎದೆಯ
ಸುಂದರ ಬೆರಗಿತ್ತು.
ಹುಡುಗ ತಾಯ ಸೆರಗ ಹೊಲೆದುಕೊಟ್ಟ.
——————————————————–
ಅವನಿಗೆ ಕಾಯುತ್ತಿದ್ದ ಅವಳ
ನೆತ್ತಿಯ ಮೇಲೆ ದಶಕಗಳೆ
ಉರುಳಿ ತೆರಳಿ ಹೋಗಿದ್ದರೂ,
ಅವಳ ಎದೆಯ ಒಳಗೆ ಈಗಲೂ
ಅವನ ಪ್ರೀತಿಯ ಎರಡು ಸಾಲಿನ
ಕವಿತೆಳು ಜೀವ ತಳೆಯುತ್ತಲೇ ಇವೆ.
———————————————————-
ಜಗತ್ತು ಅವಳನ್ನು
ಹುಡುಕುತ್ತಿತ್ತು.
ಯಾರ ಕಣ್ಣಿಗೂ ಬೀಳದೆ
ಕವಿತೆಯೊಳಗಡಗಿ ಕುಳಿತಿದ್ದಳು
ನನ್ನಿಂದ ತಪ್ಪಿಸಿಕೊಳ್ಳಲಾಗಲಿಲ್ಲ.
——————————————————–
ಹಸಿವಿನಿಂದ ಹೊರಗೆ
ಕತ್ತಲಲ್ಲಿ ಮಲಗಿದ್ದ ಕೋಟ್ಯಾಂತರ
ಜನರ ಮೇಲೆ ಬೆಳದಿಂಗಳ ಸುರಿಸಿದ
ಚಂದಿರ, ಅವರ ಹಸಿವ ನೀಗಿಸಲಾರದ
ಅಸಾಹಾಯಕತೆಗೆ ಹನಿಗೂಡಿದ್ದಾನೆ.
————————————————————-
ಅವಳ ಕೈ ಹಿಡಿದುಕೊಂಡ
ಅವನ ಸಮಸ್ತ ಖುಷಿಗಿಂತ
ಹಿಡಿದ ಹಿಡಿತ ಸಡಿಲಾಗಬಾರದು
ದೇವರೆ ಎಂದು ಬೇಡಿಕೊಂಡ
ಪರಿ ದೊಡ್ಡದಿದೆ.
—————————————————————
ಪ್ರಪಂಚದ ಅತ್ಯುತ್ತಮ
ಚಿತ್ರಕಾರರೆಲ್ಲರೂ ಚಿತ್ರಿಸಿದ
ಚಿತ್ರಿಕೆಗಳೆಲ್ಲವೂ,
ನನ್ನ ಕಪ್ಪು ಬಿಳುಪು ಸುಂದರಿಯ ಹಳೆಯ
ಫೋಟೋದ ಮುಂದೆ ತಲೆ ತಗ್ಗಿಸಿವೆ.
————————————————————
ಹತ್ತು ಮಮತೆ,
ನೂರು ನಂಬಿಕೆ,
ಸಾವಿರ ಪ್ರಾಮಾಣಿಕತೆ,
ಸಾವಿರಾರು ಪ್ರೀತಿ ಪ್ರೇಮಗಳ
ಜೊತೆ ನನ್ನವನನ್ನ ತೂಗಿದ
ತಕ್ಕಡಿಯ ಭಾಗ
ಯಾವತ್ತೂ ಕೆಳಗೇ ಇರುತ್ತದೆ
————————————————————-
ನಾನು ಕೇಳಿದ ಅಷ್ಟೂ
ಪ್ರಶ್ನೆಗಳಲ್ಲಿ ಒಂದಕ್ಕೂ ಉತ್ತರಿಸದ
ನಿನ್ನ ಪ್ರಮಾದಕ್ಕೆ ಒಂದು ಮುತ್ತನ್ನು
ಕೊಡಬೇಕೆಂಬ ಕಠಿಣ ಸಜೆಯನ್ನ ವಿಧಿಸುತ್ತಿದ್ದೇನೆ.
( ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)
ನವಿಲುಗರಿ ಮೆಚ್ಚಿದವರ(?) ಮಾತು !